ಬಂಟ್ವಾಳ | ಮೆಸ್ಸೇಜ್ ಮಾಡೋದನ್ನು ನಿಲ್ಲಿಸಿದ ಕಾರಣಕ್ಕೆ ವಿವಾಹಿತೆಯ ಮನೆಗೆ ನುಗ್ಗಿ ಕೊಲೆ ಯತ್ನ
ವಾಟ್ಸ್ ಆ್ಯಪ್ ಮೆಸ್ಸೇಜ್ ಎಲ್ಲಿಯ ತನಕ ಹುಚ್ಚು ಹಿಡಿಸಬಲ್ಲುದು ಎನ್ನುವುದಕ್ಕೆ ಲೇಟೆಸ್ಟ್ ಉದಾಹರಣೆ ಒಂದು ಬಂಟ್ವಾಳದಿಂದ ಬಂದಿದೆ.
ಇಲ್ಲೊಬ್ಬ ಆಸಾಮಿ, ತನ್ನ ಸಂಬಂಧಿಕ ಮಹಿಳೆಯೋರ್ವಳು ತನಗೆ ಮೆಸೇಜ್ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ಆಕೆಯ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಪಿಲಿಮೊಗರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಿಲಿಮೊಗರು ನಿವಾಸಿ ಉಮೇಶ್ ಎಂಬವರ ಪತ್ನಿ ಲತಾ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದು, ಗಾಯಗೊಂಡಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಲ್ಲಿಪಾಡಿ ನಿವಾಸಿ ರಮೇಶ್ ಎಂಬಾತ ಆರೋಪಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.
ಆರೋಪಿ ರಮೇಶ್ ಮತ್ತು ಲತಾ ಅವರು ಪರಸ್ಪರ ಸಂಬಂಧಿಕರು. ರಮೇಶ್ ಆಗಾಗ ಲತಾ ಅವರ ಮನೆಗೆ ಬಂದು ಹೋಗುತ್ತಿದ್ದ. ಲತಾ ಅವರಿಗೆ ಮದುವೆ ಆಗಿದ್ದು ಉಮೇಶ್ ಅವರ ಜತೆ ಅನೋನ್ಯ ದಾಂಪತ್ಯ ನಡೆಸುತ್ತಿದ್ದಾರೆ. ಕೌಟುಂಬಿಕ ಪರಿಚಯದ ವ್ಯಕ್ತಿಯಾದ ಕಾರಣ ಆತ ಲತಾ ಅವರ ಮನೆಯವರ ಜೊತೆ ಸಲುಗೆಯಿಂದ ಇದ್ದು, ಆತ ಲತಾ ಅವರಿಗೆ ಕಾಲ್ ಹಾಗೂ ಮೆಸೇಜ್ ಮಾಡುತ್ತಿದ್ದ. ಆಕೆ ಕೂಡಾ ಆತನಿಗೆ ಪ್ರತಿಯಾಗಿ ಮೆಸೇಜು ಮಾಡುತ್ತಿದ್ದರು.
ಈ ವಿಚಾರ ಗಂಡ ಉಮೇಶ್ ಅವರಿಗೆ ತಿಳಿದು ಪತ್ನಿಗೆ ಬೈದು ಮೆಸೇಜ್ ಹಾಗೂ ಕಾಲ್ ಮಾಡದಂತೆ ತಿಳಿಸಿದ್ದರು. ಪತಿಗೆ ಇಷ್ಟ ಇಲ್ಲದ ಕಾರಣ ಲತಾ ಅವರು ಮೆಸೇಜು ಮಾಡುವುದನ್ನು ನಿಲ್ಲಿಸಿದ್ದರು. ಲತಾ ಅವರ ಮೆಸೇಜು ನಿಂತ ತಕ್ಷಣ ಅರ್ಥಲಿಂದ ರಮೇಶ್ ಗಾಬರಿಯಾಗಿದ್ದ. ಈ ವಿಚಾರದಲ್ಲಿ ವಿಚಾರಿಸಲು ರಮೇಶ್ ಲತಾ ಅವರ ಮನೆಗೆ ಬಂದಿದ್ದು ಯಾಕೆ ಮೆಸೇಜ್ ಮತ್ತು ಕಾಲ್ ಮಾಡುತ್ತಿಲ್ಲ ಎಂದು ಲತಾರನ್ನು ಪ್ರಶ್ನಿಸಿದ್ದಾನೆ. ಆಗ ಲತಾ, ತನ್ನ ಗಂಡನಿಗೆ ಇದೆಲ್ಲ ಇಷ್ಟ ಆಗಲ್ಲ ಎಂದು ಅವರು ಕಾರಣವನ್ನು ತಿಳಿಸಿದಾಗ ಆರೋಪಿ ರಮೇಶ್ ಕುಪಿತನಾಗಿದ್ದ.
ಹಾಗೆ ಹತಾಶನಾದ ಆತ ನಂತರ ಅವಾಚ್ಯ ಶಬ್ದಗಳಿಂದ ಬೈದು ಮೈಮುಟ್ಟಲು ಬಂದಿದ್ದು, ಆಕೆ ವಿರೋಧ ವ್ಯಕ್ತಪಡಿಸಿ ಗಂಡನಲ್ಲಿ ತಿಳಿಸುವುದಾಗಿ ಹೇಳಿದಾಗ, ಲತಾ ಅವರ ಮನೆಯ ಒಳಗೇ ನುಗ್ಗಿ ಅಲ್ಲಿದ್ದ ಕತ್ತಿಯನ್ನು ತಂದು ತಲೆಯ ಕಡೆಗೆ ಕತ್ತಿ ಬೀಸಿದ್ದಾನೆ ಎನ್ನಲಾಗಿದೆ.
ಆಗ ಲತಾರ ಕೂಗು ಕೇಳಿ ಪಕ್ಕದ ಮನೆಯಲ್ಲಿರುವ ಮೈದುನ ಪ್ರಕಾಶ್ ಹಾಗೂ ಅತ್ತೆ ಕುಸುಮ ಅವರು ಮನೆಗೆ ಧಾವಿಸಿ ಬಂದಿದ್ದು, ಅವರನ್ನು ನೋಡಿದ ಆರೋಪಿ ಕಾಲಿಗೆ ಬುದ್ದಿ ಹೇಳಿ ಓಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲಿ ಗಾಯಗೊಂಡ ಲತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಗ್ರಾಮಾಂತರ ಪೋಲೀಸರು ಆರೋಪಿಗಾಗಿ ತಲಾಶ್ ಗೆ ಇಳಿದಿದ್ದಾರೆ.