ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ಕನಿಷ್ಠ ಕೂಲಿ ನಿಗದಿ- ಅರಗ ಜ್ಞಾನೇಂದ್ರ

ಬೆಂಗಳೂರು : ಕರ್ನಾಟಕದ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ನಿಗದಿಪಡಿಸಿರುವ ಕನಿಷ್ಠ ಕೂಲಿಯ ದರವನ್ನು ನೀಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ರಾಜ್ಯ ಕಾರಾಗೃಹ ಅಭಿವೃದ್ದಿ ಮಂಡಳಿಯ ಪ್ರಥಮ ಸಭೆಯ ನಂತರ ಮಾತನಾಡಿದ ಅವರು, ಕಾರಾಗೃಹಗಳಲ್ಲಿ ಇರುವ ಕೈದಿಗಳ ಕಾರ್ಯಕ್ಕೆ ಸರ್ಕಾರವೇ ವೇತನ ಪಟ್ಟಿಯನ್ನು ನಿಗದಿಪಡಿಸಿದೆ. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಿದ್ದು, ಕೈದಿಗಳು ತಾವು ಮಾಡಿದ ದುಡಿಮೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಪರಾಮರ್ಶಿಸಬೇಕು. ಹೀಗೆ ನಿಗದಿ ಪಡಿಸಿದ ಕನಿಷ್ಠ ಕೂಲಿ ದರವನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಕರ್ನಾಟಕದ ಹಣಕಾಸು ಇಲಾಖೆಯು ಕೈದಿಗಳಿಗೆ ವೇತನ ನೀಡುವುದಕ್ಕಾಗಿ ಏಳು ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಪ್ರಕ್ರಿಯೆ ನಡೆಸಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದರು. ಈ ವೇಳೆ ರಾಜ್ಯ ಕಾರಾಗೃಹಗಳ ಡಿಜಿ ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ,(ಗೃಹ ಇಲಾಖೆ) ರಜನೀಶ್ ಗೋಯಲ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಹಾಜರಾಗಿದ್ದರು.

ರಾಜ್ಯದ ಕಾರಾಗೃಹಗಳಲ್ಲಿ ಪ್ರಸ್ತುತ, ನೇಯ್ಗೆ, ಮರಗೆಲಸ, ಬೇಕರಿ, ಜಮಖಾನ, ಶಾಮಿಯಾನ, ಸೋಪ್ ಹಾಗೂ ಇನ್ನಿತರ ಕೈಗಾರಿಕಾ ಚಟುವಟಿಕೆಗಳು ನಡೆಯುತ್ತಿದ್ದು, ಹಾಲಿ ಇರುವ ಯಂತ್ರೋಪಕರಣಗಳ ಉನ್ನತೀಕರಣ, ಕೈದಿಗಳಿಗೆ ವೃತ್ತಿಯಲ್ಲಿ ನೈಪುಣ್ಯತೆ ಒಳಗೊಂಡಂತೆ ಹಲವಾರು ಸುಧಾರಣಾ ಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಫಲಪ್ರದ ಚರ್ಚೆಯಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Leave A Reply