ಒಡೆಯನೆಡೆಗೆ ಭಾವುಕತೆ ವ್ಯಕ್ತಪಡಿಸಿದ ಮೇಕೆಯನ್ನು ಬದುಕಿಸಿಕೊಳ್ಳಲು ಹೆಚ್ಚಿದ ಒತ್ತಡ, ಕೊಂಡುಕೊಳ್ಳಲು ಮುಂದೆ ಬಂದ ಸಹೃದಯ !
ತನ್ನ ಮಾಲೀಕನ ಹೆಗಲ ಮೇಲೆ ತನ್ನ ತಲೆ ಇಟ್ಟು ಕಣ್ಣೀರು ಹಾಕುತ್ತಿರುವ ಮೇಕೆಯೊಂದರ ಮನ ಕಲಕುವ ದೃಶ್ಯ ವೈರಲ್ ಆಗಿದೆ. ಮೊನ್ನೆ ಈದ್ ಸಂದರ್ಭ ಸಂತೆಗೆ ಮಾರಾಟಕ್ಕೆ ಬಂದ ಮೇಕೆ ಇದಾಗಿತ್ತು. ಈ ಮೇಕೆಯ ಬಗ್ಗೆ ನಾವು ಪ್ರಥಮವಾಗಿ ಬರೆದಿದ್ದು, ಈಗ ನಮ್ಮ ವೈರಲ್ ಲೇಖನಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ. ನಿರಂತರ ಕರೆಗಳ ಮತ್ತು ಕಾಮೆಂಟುಗಳ ಒತ್ತಡದ ಜತೆಗೆ ಮೇಕೆಯನ್ನು ಬದುಕಿಸಿಕೊಳ್ಳಿ ಎಂಬ ವಿನಮ್ರ ಮನವಿ ಜನದನಿಯಾಗಿ ಮೂಡಿ ಬಂದಿದೆ.
ಇದೀಗ ತನ್ನೊಡೆಯನಿಗೆ ಪ್ರೀತಿಯ ಕೂಗು ಹಾಕಿದ ಮೇಕೆಯನ್ನು ಕೊಂಡು ಕೊಳ್ಳಲು ಸಹೃದಯಿ ಪ್ರಾಣಿಪ್ರಿಯರೊಬ್ಬರು ಮುಂದೆ ಬಂದಿದ್ದಾರೆ. ದಯವಿಟ್ಟು, ಈ ಮೇಕೆ/ ಅದನ್ನು ಕೊಂಡ/ ಮಾರಿದ ವ್ಯಕ್ತಿಯ ಇರುವಿಕೆಯ ಬಗ್ಗೆ ಮಾಹಿತಿ ಲಭಿಸಿದರೆ ಈ ಕೆಳಕಂಡ ದೂರವಾಣಿಗೆ ಕರೆ/ವಾಟ್ಸ್ ಅಪ್ ಮಾಡಿ. ದೀಪಕ್ : 8217052908
ಮೇಕೆಯ ಬಗ್ಗೆ ನಾವು ಬರೆದಿದ್ದ ಲೇಖನ
ಸಾಕಿದವನಿಗೆ ದುಡ್ಡು ಮುಖ್ಯ, ಕೊಳ್ಳುವವನಿಗೆ ಅದರ ರುಚಿ ಮುಖ್ಯ. ಆದರೆ ಮನುಷ್ಯನ ಇಂತಹಾ ಯಾವುದೇ ವ್ಯವಹಾರಗಳ ಅರಿವಿಲ್ಲದ ಮೂಕ ಪ್ರಾಣಿ ಮೇಕೆ ಮಾತ್ರ ರೋಧಿಸುತ್ತಿದೆ. ಇಷ್ಟು ವರ್ಷ ತನಗೆ ಹಾಕಿದ ಮೇವು, ಇಟ್ಟ ನೀರು, ಆಹಾರ ಹಾಕಿ ಸಲುಹಿದ ಯಜಮಾನನನ್ನು ಬಿಟ್ಟು ಬೇರೆ ಕಡೆ ಹೋಗುತ್ತಿದ್ದೇನೆ ಎಂಬ ಅಗಲಿಕೆಯ ನೋವಿನಿಂದ ‘ ಅಂಬೇ ‘ ಎಂದು ಕೂಗಿ ತನ್ನ ನೋವನ್ನು ವ್ಯಕ್ತಪಡಿಸುತ್ತಿದೆ.
ಹಾಗೆ ಸಂತೆಯಲ್ಲಿ ಮಾರಾಟವಾದ ಮೇಕೆಯೊಂದು ತನ್ನ ನೋವನ್ನು ಅನುಭವಿಸುತ್ತಿರುವುದು ಮತ್ತು ತೋಡಿಕೊಳ್ಳುತ್ತಿರುವ ದೃಶ್ಯ ಮಾತ್ರ ಎಂತಹ ಕಟುಕ ಹೃದಯವುಳ್ಳವರನ್ನು ಕರಗಿಸುವಂತಿತ್ತು. ಸಮಾಜದಲ್ಲಿ ದುಡ್ಡಿಗಿರುವ ಬೆಲೆ ನನ್ನ ಭಾವನೆಗಳಿಗೆ ಇಲ್ಲ ಎಂದು ಮನುಷ್ಯ ಜಾತಿಯನ್ನು ಆ ದೃಶ್ಯ ಅಣಕಿಸುವಂತಿತ್ತು.
ಈ ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದು ಯಾವ ಊರಿನಲ್ಲೋ, ಅದ್ಯಾವ ಜಾನುವಾರು ಸಂತೆಯಲ್ಲಿ ನಡೆಯಿತೋ ಗೊತ್ತಿಲ್ಲ. ಆದರೆ ಅದು ಪ್ರಾಣಿ ಪ್ರಿಯರ ಭಾವವನ್ನು ಕೆದಕಿದೆ. ಪ್ರಾಣಿಗಳನ್ನು ತನಗಿಷ್ಟವಾದಂತೆ ಬಳಸುವ ಮನುಷ್ಯನ ದುರಾಸೆಯ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ.
ಹಾಗೆ ತಾನು ಸಾಕಿದ ಮೇಕೆಯ ಮೇಲೆ ದುಡ್ಡಿನ ವ್ಯವಹಾರ ನಡೆದು ಹಣ ಕೈ ಬದಲಾಗುತ್ತಿತ್ತು. ಅದ್ಯಾವುದರ ಪರಿವೆಯೇ ಇಲ್ಲದೆ, ತನ್ನ ಯಜಮಾನನ ಹೆಗಲ ತಬ್ಬಿ ಅಳುತ್ತಿತ್ತು, ನೋವಿನ ಕೇಕೆ ಹಾಕುತ್ತಿತ್ತು ಆ ಮೇಕೆ. ಬಹುಶಃ ಅದರ ಕೊರಳ ಹಗ್ಗದ ಕೈ ಬದಲಾದದ್ದನ್ನು ಮೇಕೆ ಗಮನಿಸಿರಬೇಕು. ಒಡೆಯ ಬಿಟ್ಟು ಹೋಗ್ತಾನೆ ಅಂತ ಕೂಗು ಹಾಕ್ತಿತ್ತು ಆ ಮೇಕೆ. ಆದರೆ ಮೇಕೆಯ ಬಗಲಲ್ಲಿ ವ್ಯವಹಾರ ಕುದುರಿತ್ತು. ಮೇಕೆಯ ಧಣಿಯು, ಗರಿಗರಿ ಹಣವನ್ನು ಝಣ ಝಣ ಎಣಿಸಿ ಪಟ್ಟಾಪಟ್ಟಿ ಚಡ್ಡಿಯ ಜೋಬಿಗೆ ತುರುಕಿದ್ದ. ಅವತ್ತು ಮೇಕೆಯ ಆ ಆಕ್ರಂದನ ನೋಡಿದ ಆ ಮಾಂಸ ಪ್ರಿಯ ಕಠೋರ ಕಣ್ಣುಗಳಲ್ಲಿ ಕೂಡಾ ಹನಿ ಜರುಗಿತ್ತು. ಡೀಲ್ ಕುದುರಿ, ದುಡ್ಡು ಜೇಬಿಗೆ ಇಳಿಸಿಕೊಂಡ ಕ್ಷಣದಲ್ಲಿ ಮೇಕೆಯ ಯಜಮಾನನ ಕಣ್ಣುಗಳಲ್ಲೂ ನೋವು ಕಾಣಿಸಿಕೊಂಡಿತ್ತು.
ನಾವೆಲ್ಲ ‘ಮಾನವೀಯ ಸಂಬಂಧ’ ಎಂಬ ಸುಂದರ ಪದ ಬಳಕೆ ಮಾಡುತ್ತೇವೆ. ಆದರೆ ಈಗ ‘ಪ್ರಾಣಿ ಸಂಬಂಧ’ ಎಂದು ಆ ಪದವನ್ನು ಬಳಸಬೇಕಾಗಿದೆ. ಕಾರಣ ಪ್ರಾಣಿಗಳು ಮಾತ್ರ ತಾನೇ ನಂಬಿಕೆಯ ಮತ್ತು ಪ್ರೀತಿಯ ವಿಷಯದಲ್ಲಿ ನಿಯತ್ತಾಗಿರುವುದು ?!