ದಕ್ಷಿಣ ಕನ್ನಡ : ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ ,ಮುಂಜಾನೆಯ ಭೀಕರ ಕಂಪನಕ್ಕೆ ನಲುಗಿದ ಜನತೆ
ದ.ಕ.ಹಾಗೂ ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಜು.2 ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಆತಂಕಗೊಂಡಿದ್ದಾರೆ. ನಿರಂತರ ಕಂಪನದಿಂದ ಜನತೆಯಲ್ಲಿ ಗಾಬರಿ ಗೊಂದಲ ಅಸ್ಥಿರತೆ ಮನೆ ಮಾಡಿದೆ.
ಕಲ್ಲುಗುಂಡಿ, ಸಂಪಾಜೆ ಹಾಗೂ ಸಮೀಪದ ಮೇಲ್ ಚೆಂಬು ಭಾಗಗಳಲ್ಲಿ ಭೂ ಕಂಪನದ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ಅನುಭವ ಹಂಚಿಕೊಂಡಿದ್ದಾರೆ. ಕೊಡಗು ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪನದ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿರುವುದಾಗಿ ತಿಳಿಸಿದೆ.
ಜೂ.30 -ಜು.1 ರ ಮಧ್ಯ ರಾತ್ರಿ ಭೂಕಂಪದ ವಿವರ :
ಸುಳ್ಯದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಜೂ.30 -ಜು.1 ರ ಮಧ್ಯ ರಾತ್ರಿ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಆತಂಕಗೊಂಡಿದ್ದಾರೆ. ರಾತ್ರಿ 1.15 ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಸಂಪಾಜೆ ಹಾಗೂ ಸಮೀಪದ ಪ್ರದೇಶ, ಸುಳ್ಯ ನಗರ ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನದ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ಅನುಭವ ಹಂಚಿ ಕೊಂಡಿದ್ದಾರೆ. ಇದೀಗ ವಾರದಲ್ಲಿ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದು ಜನರ ಆತಂಕ ಹೆಚ್ಚಿದೆ.
ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಿಗ್ಗೆ ರಿಕ್ಟರ್ ಸೇಲ್‌ನಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು.
ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು.
ಕಂಪನ ತೀವ್ರತೆ 4 ಕ್ಕಿಂತ ಹೆಚ್ಚಾದರೆ ಅಪಾಯ:
ದಕ್ಷಿಣ ಕನ್ನಡ, ಕೊಡಗು ಗಡಿ ಭಾಗಗಳಲ್ಲಿ ಪ್ರಸ್ತುತ ಸಂಭವಿಸುತ್ತಿರುವ ಭೂಕಂಪನಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.0 ಅಥವಾ ಅದಕ್ಕಿಂತ ಕಡಿಮೆ ಇರುವುದರಿಂದ ಹೆಚ್ಚಿನ ಹಾನಿ ಅಥವಾ ಅಪಾಯ ಸಂಭವಿಸಿಲ್ಲ, ಆದರೆ ಕಂಪನ 4.0 ಅಥವಾ ಅದಕ್ಕಿಂತ ಹೆಚ್ಚಾದಲ್ಲಿ ತೀವ್ರ ತರದ ಹಾನಿ ಸಂಭವಿಸಬಹುದು ಎಂದು ಭೂಗರ್ಭ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸತತಭೂಕಂಪನದ ಬಗ್ಗೆ ತಕ್ಷಣ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಸೂಚಿಸಬೇಕು ಎಂದು ಈ ಪ್ರದೇಶದ ಜನರು ಒತ್ತಾಯಿಸಿದ್ದಾರೆ.