ಕ್ಲೋರಿನ್​ ಟ್ಯಾಂಕ್​ ಹಡಗಿನ ಮೇಲೆ ಬಿದ್ದು 12 ಮಂದಿ ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ- ಭೀಕರ ದೃಶ್ಯ ವೈರಲ್

ಕ್ಲೋರಿನ್​ ಟ್ಯಾಂಕ್​ ಹಡಗಿನ ಮೇಲೆ ಬಿದ್ದ ಪರಿಣಾಮ ವಿಷಾನಿಲ ಸೋರಿಕೆಯಾಗಿ 12 ಮಂದಿ ದಾರುಣವಾಗಿರುವ ಸಾವಿಗೀಡಾಗಿ, ಸುಮಾರು 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ  ಘಟನೆ ಜಾರ್ಡನ್​ನಲ್ಲಿ ನಡೆದಿದೆ.

ಸೋಮವಾರ ಜಾರ್ಡನ್​ನ ಅಖಾಬಾ ಬಂದರಿನಲ್ಲಿ ಕ್ರೇನ್​ ಒಂದು ಕ್ಲೋರಿನ್​ ಟ್ಯಾಂಕ್​ಗಳನ್ನು ಹಡಗಿಗೆ ಭರ್ತಿ ಮಾಡುತ್ತಿತ್ತು. ಈ ವೇಳೆ ಕ್ರೇನ್​ನಿಂದ ಆಕಸ್ಮಿಕ ಟ್ಯಾಂಕ್​ ಒಂದು ಕೆಳಗೆ ಬಿದ್ದಿದೆ. ಪರಿಣಾಮ ಹಳದಿ ಬಣ್ಣದ ವಿಷಾನಿಲ ಸ್ಫೋಟಗೊಂಡಿದ್ದು, ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ‘ಕ್ರೇನ್​​ ಅಸಮರ್ಪಕ ಕಾರ್ಯದ ಪರಿಣಾಮವಾಗಿ ಸಾಗಿಸುವ ಸಂದರ್ಭದಲ್ಲಿ ರಾಸಾಯನಿಕ ಸಂಗ್ರಹಣೆಯ ಕಂಟೇನರ್ ಕೆಳಗೆ ಬಿದ್ದು, ದುರ್ಘಟನೆ ನಡೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಾನಿಲ ಸೋರಿಕೆಯ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕ್ಲೋರಿನ್​ ಟ್ಯಾಂಕ್​ ಹೊತ್ತ ಕ್ರೇನ್​, ಹಡಗಿನ ಮೇಲೆ ಇರಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮೇಲಿಂದ ಹಡಗಿನ ಮೇಲೆಯೇ ಟ್ಯಾಂಕ್​ ಬೀಳುತ್ತದೆ. ಪರಿಣಾಮ ತಕ್ಷಣ ಸ್ಫೋಟಗೊಂಡು ಮೋಡದ ರೀತಿಯಲ್ಲಿ ಭಾರೀ ಪ್ರಮಾಣದ ಹಳದಿ ಬಣ್ಣ ಸುತ್ತಮುತ್ತ ಹರಡಿಕೊಳ್ಳುತ್ತದೆ. ಡಕ್‌ವರ್ಕರ್​ಗಳು ವಿಷಕಾರಿ ಹೊಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವ 250ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಬಂದರಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಅಕಾಬಾ ನಗರದ ನಿವಾಸಿಗಳು ಮನೆಯ ಒಳಗೆ ಉಳಿಯಲು ಮತ್ತು ಕಿಟಕಿ, ಬಾಗಿಲುಗಳನ್ನು ಮುಚ್ಚಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸ್ಫೋಟ ಸಂಭವಿಸಿರುವ ಸ್ಥಳವನ್ನು ಶುಚಿಗೊಳಿಸಲು ಜಾರ್ಡನ್​ನ ನಾಗರಿಕ ರಕ್ಷಣಾ ಇಲಾಖೆಯು ವಿಶೇಷ ತಂಡಗಳನ್ನು ಬಂದರಿಗೆ ಕಳುಹಿಸಿದೆ.

https://twitter.com/suzanneb315/status/1541545605826232321?ref_src=twsrc%5Etfw%7Ctwcamp%5Etweetembed%7Ctwterm%5E1541545605826232321%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F
Leave A Reply

Your email address will not be published.