ವಿಚ್ಛೇದನವಾಗಿ ಬರೋಬ್ಬರಿ 52 ವರ್ಷಗಳ ಬಳಿಕ ದಂಪತಿಯನ್ನು ಮತ್ತೆ ಒಂದುಗೂಡಿಸಿದ ಅದೇ ನ್ಯಾಯಾಲಯ!!

ವಿಚ್ಛೇದನವಾದ ಬರೋಬ್ಬರಿ 52 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಇಬ್ಬರನ್ನು ದೂರಮಾಡಿದ್ದ ನ್ಯಾಯಾಲಯವೇ ಮತ್ತೆ ಜೊತೆ ಸೇರಿಸಿದೆ. ಹೌದು. ಯೌವ್ವನದಲ್ಲಿ ನ್ಯಾಯಾಲಯದ ಮೂಲಕ ಬೇರೆಯಾದ ದಂಪತಿಯನ್ನು ಬೇರೊಬ್ಬರಿ 52 ವರ್ಷಗಳ ಬಳಿಕ ಮತ್ತೆ ಅದೇ ನ್ಯಾಯಾಲಯ ಒಂದು ಮಾಡಿದ ಅಪರೂಪದ ಘಟನೆ ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ನಡೆದಿದೆ.

ಕಲಘಟಗಿಯಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‍ನಲ್ಲಿ ನ್ಯಾಯಧೀಶರಾದ ಜಿ.ಆರ್.ಶೆಟ್ಟರ್ ಅವರು ಈ ಅಪರೂಪದ ರಾಜಿ ಸಂಧಾನ ಮಾಡಿಸಿದ್ದಾರೆ. ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ(80) ವೃದ್ಧಾಪ್ಯದಲ್ಲಿ ಒಂದಾದ ದಂಪತಿ. 52 ವರ್ಷದ ಹಿಂದೆ ಪರಸ್ಪರ ಒಪ್ಪಿಗೆ ಮೂಲಕ ಈ ದಂಪತಿ ವಿಚ್ಛೇದನ ಪಡೆದಿದ್ದರು.

ಹೀಗಾಗಿ ಪ್ರತಿ ತಿಂಗಳು ಕಲ್ಲವ್ವಳಿಗೆ ಬಸಪ್ಪ ಜೀವನಾಂಶ ನೀಡುತ್ತಿದ್ದರು. ಆದರೆ ಕೆಲ ತಿಂಗಳಿನಿಂದ ಬಸಪ್ಪ ಜೀವನಾಂಶ ಕೊಡುವುದನ್ನು ನಿಲ್ಲಿಸಿದ್ದರು. ಈ ಹಿನ್ನೆಲೆ ಪತಿ ಕಲ್ಲವ್ವ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಹಿರಿಯ ದಿವಾನಿ ನ್ಯಾಯಾಲಯ ಇಬ್ಬರ ಆರೋಗ್ಯ ಮತ್ತು ವಯೋಮಾನದ ದೃಷ್ಟಿಯಿಂದ ರಾಜಿ ಸಂಧಾನ ಮಾಡಿಸಿ ಒಂದು ಮಾಡಿದೆ. ಈ ಸಂಧಾನಕ್ಕೆ ವಕೀಲರು ಸಹ ಸಮ್ಮತಿ ನೀಡಿ ವೃದ್ಧ ದಂಪತಿಯನ್ನು ಒಂದು ಮಾಡಿದ್ದಾರೆ. ಹಾಗಾಗಿ ಇದೀಗ 52 ವರ್ಷಗಳ ಬಳಿಕ ಈ ವೃದ್ಧ ಜೋಡಿ ಮತ್ತೆ ಒಂದಾಗಿದೆ.

Leave A Reply

Your email address will not be published.