ಕಡಬ: ಶಿಕ್ಷಕರಿಂದ ಇಬ್ಬರು ವಿದ್ಯಾರ್ಥಿಗಳಿಗೆ ಹಲ್ಲೆ -ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕಡಬ: ಸರ್ಕಾರಿ ಪ್ರೌಢಶಾಲಾ ಶಿಕ್ಷಕರೋರ್ವರು ತರಗತಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳಿಬ್ಬರು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.

ಕಡಬ ಸರ್ಕಾರಿ ಪ್ರೌಢಶಾಲಾ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಸುದೀಶ್ ಮತ್ತು ದಿಗಂತ್ ಎಂಬಿಬ್ಬರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿ ಶಿಕ್ಷಕ ಖಾದರ್ ಎಂಬವರು ಜೂ.೨೩ರಂದು ಪೂರ್ವಾಹ್ನ ತರಗತಿಯಲ್ಲಿ ಸಣ್ಣ ತಪ್ಪಿಗೆ ಕೆನ್ನೆಗೆ ಸಿಕ್ಕಾಪಟ್ಟೆ ಬಾರಿಸಿದ್ದಾರೆ ಇದರಿಂದ ಕೆನ್ನೆ ಊದಿಕೊಂಡಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಕರ ವಿರುದ್ದ ಸೂಕ್ತ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಸುಖಾಂತ್ಯಗೊಳಿಸುವ ಬಗ್ಗೆ ತಡ ರಾತ್ರಿಯವರೆಗೂ ಇತ್ತಂಡಗಳ ನಡುವೆ ಮಾತುಕತೆಗಳು ನಡೆಯುತ್ತಿರುವುದು ಒಂದೆಡೆಯಾದರೆ, ಶಿಕ್ಷಕರ ವಿರುದ್ದ ದೂರು ನೀಡುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ.

ಸಂಪೂರ್ಣ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ-ವೇದಾವತಿ, ಉಪ ಪ್ರಾಂಶುಪಾಲೆ
ಈ ಬಗ್ಗೆ ಶಾಲಾ ಉಪ ಪ್ರಾಂಶುಪಾಲೆ ವೇದಾವತಿ ಅವರು ಪ್ರತಿಕ್ರಿಯೆ ನೀಡಿ ವಿದ್ಯಾರ್ಥಿಗಳನ್ನು ಭೇಟಿಯಾಗಿ ವಿಚಾರಿಸಲಾಗಿದೆ. ಆರೋಗ್ಯವಾಗಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣ ವಿವರ ಪಡೆದುಕೊಂಡು ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಚಿಂತನೆ: ಲೋಕೇಶ್, ಶಿಕ್ಷಣಾಧಿಕಾರಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು, ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ವರದಿ ನೀಡುವಂತೆ ಸ್ಥಳೀಯ ಶಿಕ್ಷಣ ಸಂಯೋಜಕರಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ.

ನಾನು ಅಂತಹ ಪೆಟ್ಟು ಕೊಟ್ಟಿಲ್ಲ- ಅಬ್ದುಲ್ ಖಾದರ್
ಈ ಬಗ್ಗೆ ಆರೋಪಿತ ಶಿಕ್ಷಕರಾದ ಅಬ್ದುಲ್ ಖಾದರ್ ಅವರನ್ನು ವಿಚಾರಿಸಿದಾಗ, ನಾನು ವಿದ್ಯಾರ್ಥಿಗಳಿಗೆ ಅಂತಹ ಗಂಭೀರ ಪೆಟ್ಟು ಕೊಟ್ಟಿಲ್ಲ, ಯಾಕೆ ಈ ರೀತಿ ಮಾಡಲಾಗಿದೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಚ” ಅಕ್ಷರ ಹಿಂದಿಯಲ್ಲಿ ಬರೆದಿರುವುದು ತಪ್ಪಾಗಿರುವುದಕ್ಕೆ ಈ ರೀತಿ ಹಲ್ಲೆ ಮಾಡಲಾಗಿದೆ-ದಿನೇಶ್(ಪೋಷಕರು)
ಘಟನೆಯ ಬಗ್ಗೆ ಸುದೀಶ್ ಅವರ ತಂದೆ ದಿನೇಶ್ ಅವರು ಪ್ರತಿಕ್ರಿಯೆ ನೀಡಿ, “ಚ” ಅಕ್ಷರವನ್ನು ಹಿಂದಿಯಲ್ಲಿ ಬರೆದಿರುವುದು ತಪ್ಪಾಗಿತ್ತು, ಇದಕ್ಕೆ ಇಬ್ಬರು ವಿದ್ಯಾರ್ಥಿಗಳಿಗೂ ಗಂಭೀರವಾಗಿ ಕೆನ್ನೆಗೆ ಹೊಡೆದಿದ್ದಾರೆ ಎಂದು ಮಗ ನೀಡಿದ ಮಾಹಿತಿ ಪ್ರಕರಣವನ್ನು ಸುಮ್ಮನೆ ಬಿಡುವ ಪ್ರಶ್ನೆಯೆ ಇಲ್ಲ, ಶಿಕ್ಷಕರ ವಿರುದ್ದ ಪೋಲಿಸರಿಗೆ ದೂರು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಎ.ಬಿ.ವಿ.ಪಿ.ಯಿಂದ ಹೋರಾಟದ ಎಚ್ಚರಿಕೆ
ಆಸ್ಪತ್ರೆಗೆ ಭೇಟಿ ನೀಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸುಬ್ರಹ್ಮಣ್ಯ ಘಟಕ ವತಿಯಿಂದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಶಿಕ್ಷಕರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಕ್ರಮ ಜರಗಿಸಬೇಕು, ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಅಗ್ರಹಿಸಿದ್ದಾರೆ. ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳದೆ ಇದ್ದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿರುವ ಎ.ಬಿ.ವಿ.ಪಿ,. ಸಂಘಟನೆಯ ವಿದ್ಯಾರ್ಥಿಗಳು ಬಳಿಕ ತಹಸೀಲ್ದಾರ್ ಮೂಲಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಪ್ರಮುಖರಾದ ಚರಣ್, ತೇಜಸ್, ಮನೀಶ್, ಯತೀನ್, ತೀರ್ಥಪ್ರಸಾದ್ ಉಪಸ್ಥಿತಿ ಇದ್ದರು.

Leave A Reply

Your email address will not be published.