‘ಅಗ್ನಿಪಥ್’ ವಿರೋಧದ ನಡುವೆಯೇ ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಗೃಹ ಇಲಾಖೆ !!
ದೇಶದಲ್ಲೆಡೆ ಅಗ್ನಿಪಥ್ ಯೋಜನೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ವಿರೋಧದ ನಡುವೆಯೇ ಕೇಂದ್ರ ಗೃಹ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ.
ಅಗ್ನಿಪಥ್ ವಿರೋಧಿಸಿ ಈಗಾಗಲೇ ದೇಶದ್ಯಾಂತ ಪ್ರತಿಭಟನೆ ನಡೆಯುತ್ತಿದೆ. ಉತ್ತರಪ್ರದೇಶ, ಬಿಹಾರ ಹಾಗೂ ತೆಲಂಗಾಣಗಳಲ್ಲಿ ಪ್ರತಿಭಟನೆಯೂ ಹಿಂಸಾತ್ಮಕಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಈ ನಡುವೆ ಕೇಂದ್ರ ಗೃಹ ಇಲಾಖೆ ಅಗ್ನಿವೀರರಿಗೆ 10% ಮೀಸಲಾತಿ ನೀಡಿದ್ದು, ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲಿ ಮೀಸಲಾತಿ ನೀಡಿದೆ.
ಅಷ್ಟೇ ಅಲ್ಲದೇ ಎರಡು ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು 3 ವರ್ಷಕ್ಕೆ ಸಡಿಲಿಕೆ ಮಾಡಿದ್ದು, ಅಗ್ನಿವೀರ್ ಮೊದಲ ಬ್ಯಾಚ್ ನೇಮಕಾತಿಗೆ 5 ವರ್ಷ ಸಡಿಲಿಸಿದೆ.
ವಿರೋಧ ಯಾಕೆ ??
ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ದೇಶದ ಮಿಲಿಟರಿಯಲ್ಲಿ ಸೇವೆ ಮಾಡಲು ಯುವ ಜನರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಆರಂಭಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಇದು ತಾತ್ಕಾಲಿಕ ಪರಿಹಾರ ಎನ್ನುವುದು ವಿರೋಧಿಸುತ್ತಿರುವವರ ವಾದವಾಗಿದೆ.
4 ವರ್ಷದ ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಇದರ ಬದಲು ಬೇರೆ ವಲಯಕ್ಕೆ ಸೀಮಿತವಾಗುವಂತೆ ಉದ್ಯೋಗಾವಕಾಶವನ್ನು ಮಾಡಬಹುದು. 4 ವರ್ಷದ ಅವಧಿಗೆ ಕೆಲಸ ಮಾಡುವ ಉದ್ದೇಶ ಇದ್ದರೆ ಇವರಲ್ಲಿ ದೇಶ ಸೇವೆಯ ಮನೋಭಾವ ಬರಲ್ಲ ಎನ್ನುವ ವಾದದ ಮೇಲೆ ವಿರೋಧ ವ್ಯಕ್ತವಾಗುತ್ತಿದೆ.