ಮಗುವಿನೊಂದಿಗೆ ಮಹಿಳೆ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !!!

ಮಗುವಿನೊಂದಿಗೆ ಮಹಿಳೆ ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟೊಂದು ದೊರಕಿದೆ. ಮಹಿಳೆಯು
ತನ್ನ ಅತ್ತೆಯ ಕಿರುಕುಳದಿಂದ ಬೇಸತ್ತು, ಆತ್ಮಹತ್ಯೆ ಮಾಡಬೇಕೆನ್ನುವ ಉದ್ದೇಶದಿಂದ ತನ್ನ ಎರಡು ವರ್ಷದ ಮಗುವಿನ ಜೊತೆ‌ ಮನೆಯಿಂದ ಹೊರ ಹೋಗಿದ್ದಾಳೆ.

ಆದರೆ, ಧರ್ಮಸ್ಥಳ ಪೊಲೀಸರ ಸಮಯಪ್ರಜ್ಞೆಯಿಂದ ತಾಯಿ ಹಾಗೂ ಮಗು ಈಗ ಬದುಕಿ ಉಳಿದಿದ್ದಾರೆ.

ಮಡಿಕೇರಿಯ ಶುಂಠಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯ ದಿನೇಶ್ ಎಂಬುವವರ ಪತ್ನಿ ಸೌಮ್ಯ ಮನೆಯಲ್ಲಿ ಅತ್ತೆಯ ಕಿರುಕುಳದಿಂದ ನೊಂದಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ದೃಢ ನಿರ್ಧಾರ ಮಾಡಿ, ಜೂನ್ 14 ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮಗುವಿನ ಜೊತೆ ಮನೆ ಬಿಟ್ಟಿದ್ದ ಸೌಮ್ಯ ಸಂಜೆಯಾದರೂ, ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಅನುಮಾನ ಬಂದ ಕುಟುಂಬಸ್ಥರು ಮಹಿಳೆಯ ಪತ್ತೆಗಾಗಿ ಶುಂಠಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆದರೆ ಕುಟುಂಬಸ್ಥರು ಮಹಿಳೆ ಧರ್ಮಸ್ಥಳದ ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿರಬಹುದೆಂಬ ಆತಂಕ ವ್ಯಕ್ತಪಡಿಸಿದ್ದರಿಂದ ಧರ್ಮಸ್ಥಳ ಪೋಲಿಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರ್ಮಸ್ಥಳ ಪೊಲೀಸರು ಬಸ್ ನಿಲ್ದಾಣದಲ್ಲಿ ಮಡಿಕೇರಿಯಿಂದ ಬರುವ ಬಸ್ ಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ನಲ್ಲಿ ಮಗುವಿನ ಜೊತೆ ಸೌಮ್ಯ ಪತ್ತೆಯಾಗಿದ್ದಾರೆ.

ಕೂಡಲೇ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅತ್ತೆಯ ಕಿರುಕುಳದಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಆತ್ಮಹತ್ಯೆಗೆ ನಿರ್ಧರಿಸಿ ಇಲ್ಲಿಗೆ ಬಂದಿರುವುದಾಗಿ ಹೇಳಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮಗು ಮತ್ತು ತಾಯಿಯನ್ನ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಎರಡು ಜೀವಗಳು ಬದುಕುಳಿದಿವೆ.

Leave A Reply