ಯೋಗಿ ಸರ್ಕಾರಕ್ಕೆ ಬಿಗ್ ರಿಲೀಫ್, ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ನಕಾರ !
ಉತ್ತರ ಪ್ರದೇಶದಲ್ಲಿ ಈಗ ಎಲ್ಲಿ ನೋಡಿದರೂ ಬುಲ್ಡೋಜರಿದ್ದೇ ಮಾತು. ಯಾವುದೇ ಗಲಭೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ಗಳಿಂದ ಕೆಡವುತ್ತಿರುವ ನಡೆ ಇತ್ತೀಚೆಗೆ ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ನಡೆಗೆ ತಡೆ ಆಡಲು ನೀಡಲು ಸುಪ್ರೀಕೋರ್ಟ್ ನಿರಾಕರಿಸಿದೆ. ಅಲ್ಲಿಗೆ ಯೋಗಿ ಸರ್ಕಾರಕ್ಕೆ ಮುನ್ನಡೆ ಸಿಕ್ಕಿದೆ.
ಆದರೆ
ಸುಪ್ರೀಂಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ಮೂರು ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಅದು ಸೂಚನೆ ನೀಡಿದೆ.
ಉತ್ತರ ಪ್ರದೇಶ ಸರ್ಕಾರ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿದೆ. ಆ ಸಮುದಾಯದ ಆಸ್ತಿಗಳನ್ನು ನೆಲಸಮ ಮಾಡುತ್ತಿದೆ. ಈ ತೆರವು ಕಾರ್ಯಾಚರಣೆ ನಡೆಯೋ ಮುನ್ನ ಯಾವುದೇ ನೋಟಿಸ್ ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಈ ನಿರ್ದೇಶನ ಕೊಟ್ಟಿದೆ. ಆದರೆ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಬುಲ್ಡೋಜರ್ ಹತ್ತಿಸುವ ಮುನ್ನ ನೋಟಿಸ್‌ಗಳನ್ನು ನೀಡಿಲ್ಲ ಎಂಬ ಆರೋಪ ಸುಳ್ಳು ಎಂದು ಸರ್ಕಾರ ಈ ಆರೋಪಗಳನ್ನು ನಿರಾಕರಿಸಿದೆ.
“ಕಾನೂನಿಗೆ ಅನುಗುಣವಾಗಿ ತೆರವು ಕಾರ್ಯಾಚರಣೆ ನಡೆಯಬೇಕು. ಈ ನಡೆಗಳು ಪ್ರತೀಕಾರದ ಕ್ರಮವಾಗಬಾರದು” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆದರೂ ಎಲ್ಲ ಕ್ರಮಗಳನ್ನು ನಿಲ್ಲಿಸುವಂತೆ ಹೇಳುತ್ತಿಲ್ಲ ಎಂದ ಕೋರ್ಟ್, ಆದರೆ ಎಲ್ಲ ಕ್ರಮಗಳೂ ಕಾನೂನಿನ ಪರಿಮಿತಿಯಲ್ಲಿ ನಡೆಯಬೇಕು. ಎಲ್ಲವೂ ನ್ಯಾಯಸಮ್ಮತವಾಗಿ ಕಾಣಬೇಕು. ಕಾನೂನಿಗೆ ಅನುಗುಣವಾಗಿ ಅಧಿಕಾರಿಗಳು ವರ್ತಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತೆ ಕಾಪಾಡಬೇಕು” ಎಂದು ಹೇಳಿದೆ.
ಸರ್ಕಾರವು ತನ್ನ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಳುಹಿಸಲಾದ ನೋಟಿಸ್‌ಗಳು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ತನ್ನ ಅಫಿಡವಿಟ್‌ನಲ್ಲಿ ಸಲ್ಲಿಸಬೇಕಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿದ್ದು, ರಾಜ್ಯ ಸರ್ಕಾರ ಹಾಗೂ ಪ್ರಯಾಗ್‌ರಾಜ್ ಮತ್ತು ಕಾನ್ಪುರ ಜಿಲ್ಲಾಡಳಿತಗಳಿಂದ ಉತ್ತರ ಕೇಳಿದೆ. “ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಸಿಗಲಿದೆ. ನಾವು ಅರ್ಜಿದಾರರ ಸುರಕ್ಷತೆಯನ್ನು ಖಾತರಿಪಡಿಸಬೇಕಿದೆ. ಅವರು ಕೂಡ ಸಮಾಜದ ಭಾಗ, ಯಾರಾದರೂ ಅಹವಾಲು ಹೊಂದಿದ್ದಾಗ, ಅದನ್ನು ಪರಿಶೀಲಿಸಬೇಕು ಎಂಬ ಹಕ್ಕು ಅವರಿಗೆ ಇದೆ. ಅಂತಹ ತೆರವು ಕಾರ್ಯಗಳು ಕಾನೂನಿನ ಪ್ರಕಾರ ಮಾತ್ರ ನಡೆಯಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಜಹಾಂಗೀರ್‌ಪುರಿಯಲ್ಲಿ ಯಾವ ಸಮುದಾಯದವರು ಆಸ್ತಿಯ ಮಾಲೀಕರು ಎನ್ನುವುದನ್ನು ನೋಡದೆ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಅಂತಹ ಕಾರ್ಯಗಳು ಅಗತ್ಯ ಪ್ರಕ್ರಿಯೆಗಳಿಗೆ ಅನುಗುಣವಾಗಿ ನಡೆಯುತ್ತವೆ. ಇತ್ತೀಚಿನ ಕಾರ್ಯಚರಣೆಗಳು ಕೂಡ ಅದೇ ರೀತಿ ನಡೆದಿವೆ. ಅಗತ್ಯವಿರುವ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದರು.
“ಇಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಅರ್ಜಿದಾರರ ಪರ ವಕೀಲ ಸಿಯು ಸಿಂಗ್ ಆರೋಪಿಸಿದರು. ಕಾನೂನಿನ ಪ್ರಕಾರ ಯಾವುದೇ ತೆರವು ಕಾರ್ಯಕ್ಕೂ ಮುನ್ನ ಕನಿಷ್ಠ 15- 40 ದಿನಗಳ ನೋಟಿಸ್ ನೀಡಬೇಕು ಎಂದು ಪ್ರತಿಪಾದಿಸಿದರು.
ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂದು ವಾದಿಸಿದ ಉತ್ತರ ಪ್ರದೇಶ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ, “ತೆರವು ಕಾರ್ಯಗಳನ್ನು ಮಾಧ್ಯಮಗಳು ಅನಗತ್ಯವಾಗಿ ರಾಜಕೀಯ ಹೇಳಿಕೆಗಳಿಗೆ ಥಳುಕು ಹಾಕುತ್ತಿವೆ’ ಎಂದು ಆರೋಪ ಮಾಡಿದ್ದಾರೆ. “ಅರ್ಜಿದಾರರು ಪತ್ರಿಕೆಗಳ ವರದಿಗಳನ್ನು ಅವಲಂಬಿಸಿವೆ. ನಾವು ಅಧಿಕೃತ ದಾಖಲೆಗಳ ಮೇಲೆ ಅವಲಂಬಿಸಿದ್ದೇವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ವಾದಿಸಿದರು.