ರಾಷ್ಟ್ರಪತಿ ಹುದ್ದೆಯ ಸನಿಹದಲ್ಲಿ ಮಾಜೀ ಪ್ರಧಾನಿ ದೇವೇಗೌಡ ?!

ರಾಷ್ಟ್ರಪತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ವಿರೋಧಪಕ್ಷಗಳನ್ನು ಜತೆಗೂಡಿಸಿ ರಣತಂತ್ರ ಹೆಣೆಯಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಜೂನ್ 15ರಂದು ಎಲ್ಲರೂ ಹೊಸದಿಲ್ಲಿಯಲ್ಲಿ ಸಭೆ ಸೇರೋಣ ಎಂದು ವಿರೋಧ ಪಕ್ಷಗಳ ನಾಯಕರಿಗೆ ಮಮತಾ ಶನಿವಾರ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಜಂಟಿ ಕಾರ್ಯತಂತ್ರ ರೂಪಿಸಲು ತಯಾರಿ ನಡೆಸುವುದು ಅವರ ಉದ್ದೇಶವಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ ತೃತೀಯ ರಂಗದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಾರ ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯ ದೇಶದ ಗಮನ ಸೆಳೆಯುತ್ತಿರುವ ವಿಷಯ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿರೋಧ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಹಲವ ಪಕ್ಷಗಳ ಮುಖ್ಯಸ್ಥರನ್ನು ಸಂಪರ್ಕಿಸಿರುವ ಅವರು ಎಲ್ಲರನ್ನೂ ಒಗ್ಗೂಡಿಸಿ ಒಂದು ಸಭೆ ಕರೆದಿದ್ದಾರೆ.

ಭಾರತದ ರಾಷ್ಟ್ರಪತಿ ಆಯ್ಕೆಗೆ ಜುಲೈ 18ರಂದು ಚುನಾವಣೆ ನಡೆಯಲಿದೆ. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಈ ತಿಂಗಳ ಅಂತ್ಯಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಅಷ್ಟರ ಒಳಗೆ ಎನ್‌ಡಿಎ ಹಾಗೂ ವಿರೋಧಪಕ್ಷಗಳು ತಮ್ಮ ರಾಷ್ಟ್ರಪತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ.

ಕಾಂಗ್ರೆಸ್ ಸೇರಿದಂತೆ 22 ಪಕ್ಷಗಳಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಈ ಸಭೆಗೆ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ (89) ಹಾಗೂ ಮಾಜಿ ಸಿ.ಎಂ ಎಚ್ .ಡಿ.ಕುಮಾರಸ್ವಾಮಿ ಅವರನ್ನು ದೀದಿ ಕರೆಸಿಕೊಂಡಿದ್ದಾರೆ. ‘ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

“ಈ ಸಭೆಯಲ್ಲಿ ಪಾಲ್ಗೊಳ್ಳಲು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ಡಿ ದೇವೇಗೌಡರಿಗೆ ಹಾಗೂ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಹೀಗಾಗಿ ನಾವಿಬ್ಬರೂ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಷ್ಟ್ರಪತಿ ರೇಸಲ್ಲಿ ದೇವೇಗೌಡರ ಹೆಸರು ಕೇಳಿಬರಲು ಇನ್ನೊಂದು ಕಾರಣವೇನೆಂದರೆ, ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಎನ್‌ಸಿಪಿ ಮುಖ್ಯಸ್ಥ 81 ವರ್ಷದ ಶರದ್ ಪವಾರ್ ಅವರು ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ, ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ ಅವ ಹೆಸರು ಒಂದು ಕಡೆಯಲ್ಲಿ ದಟ್ಟವಾಗಿ ಕೇಳಿಬಂದರೆ, ಬಿಜೆಪಿ ಮತ್ತು ಕಾಂಗ್ರೆಸ್ ಸಹ ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿವೆ ಎಂಬುದು ಕುತೂಹಲ ಇದೆ.

Leave A Reply

Your email address will not be published.