60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ ಬರೋಬ್ಬರಿ 100 ಗಂಟೆಯ ಬಳಿಕ ಸಾವು ಗೆದ್ದ !!

ಬೋರ್ ವೆಲ್ ನಲ್ಲಿ ಬಿದ್ದ 11 ವರ್ಷದ ಬಾಲಕ ಪವಾಡಸದೃಶವಾಗಿ ಬದುಕಿ ಬಂದಿದ್ದಾನೆ. ಸತತ 100 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಂತರ ಬಾಲಕನನ್ನು ಪೊಲೀಸರು ರಕ್ಷಿಸಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.
ಛತ್ತೀಸಗಢದ ಚಾಂಜ್ಗೀರ್ ಚಂಪಾದ ಪಿಹ್ರಿದ್ ಗ್ರಾಮದಲ್ಲಿ ಮನೆಯ ಬಳಿ ಆಡುತ್ತಿದ್ದ ಬಾಲಕ ರಾಹುಲ್ ಸಾಹು, ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ. ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಛತ್ತೀಸಗಡ ಸರ್ಕಾರವು ವಿವಿಧ ಇಲಾಖೆಗಳ ಸುಮಾರು 500 ಸಿಬ್ಬಂದಿಯನ್ನು ನಿಯೋಜಿಸಿತ್ತು. ಸುದೀರ್ಘ ಕಾರ್ಯಾಚರಣೆ ನಡೆಸಿ, ಬಾಲಕನನ್ನು ಜೀವಂತವಾಗಿ ರಕ್ಷಿಸಿದ ಮೊದಲ ಪ್ರಕರಣ ಇದಾಗಿದೆ. ಪ್ರಸ್ತುತ ಬಿಲಾಸ್ಪುರದ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ತಜ್ಞ ವೈದ್ಯರ ತಂಡವು ಬಾಲಕನಿಗೆ ಚಿಕಿತ್ಸೆ ಕೊಡುತ್ತಿದೆ.
104 ಗಂಟೆಗಳ ಅವಧಿಯ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಪಡೆ, ಸೇನೆ, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಳೆದ ಶುಕ್ರವಾರ ಸಂಜೆಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು.
ಆಟವಾಡುತ್ತಿದ್ದ ಬಾಲಕ ರಾಹುಲ್ ಸಾಹು ಪಿಹ್ರಿದ್ ಗ್ರಾಮದಲ್ಲಿ ತನ್ನ ಮನೆಯ ಹಿತ್ತಲಿನಲ್ಲಿದ್ದ ಕೊಳವೆಬಾವಿಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಬಿದ್ದಿದ್ದ. ಸುಮಾರು 60 ಆಳದಲ್ಲಿ ಸಿಲುಕಿದ್ದ ಅವನಿಗೆ ಉಸಿರಾಟಕ್ಕೆ ಸಹಾಯವಾಗಲೆಂದು ಪೈಪ್ ಮೂಲಕ ಆಮ್ಲಜನಕ ಸರಬರಾಜು ಮಾಡಲಾಗಿತ್ತು. ಆತ ಬಿದ್ದ ಕೊಳವೆ ಬಾವಿಗೆ ಸಮಾನಾತರವಾಗಿ ಇನ್ನೊಂದು ಕೊಳವೆ ಬಾವಿಯನ್ನು ಕೊರೆದು ನಂತರ ಎರಡೂ ಬಾವಿಗಳನ್ನು ಜೋಡಿಸಲು 15 ಅಡಿಗಳ ಕೊಳವೆ ಬಾವಿಗಳನ್ನು ಜೋಡಿಸಲಾಗಿತ್ತು.
ಅಲ್ಲಿ ಹಾವು ಮತ್ತು ಕಪ್ಪೆಗಳ ಸಂಗಡ ಬಾಲಕ 104 ಗಂಟೆಗಳ ಕಾಲ ಧೈರ್ಯದಿಂದ ಇದ್ದು ಬದುಕಿ ಬಂದದ್ದೇ ಒಂದು ಪವಾಡ. ಯಶಸ್ವಿ ಕಾರ್ಯಾಚರಣೆಯ ನಂತರ ರಕ್ಷಣಾ ತಂಡವನ್ನು ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅಭಿನಂದಿಸಿದ್ದಾರೆ. ದೇಶದ ಕೋಟ್ಯಾಂತರ ಜನರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಹುಡುಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.