ತೂಕ 200 ಕೆಜಿ; 80 ರೊಟ್ಟಿ, 3 ಕೆಜಿ ಅಕ್ಕಿ, 2 ಕೆಜಿ ಮಟನ್, 2 ಲೀ ಹಾಲು ಆತನ ಸಿಂಪಲ್ ಮೀಲ್ಸ್ !| ತನಗೆ ಅಡುಗೆ ಮಾಡಿ ಹಾಕಲೆಂದೇ ಇನ್ನೊಂದು ಮದ್ವೆ ಆದ ಭೀಮಕಾಯ !!
ಬಿಹಾರದ ಕತಿಹಾರ್‌ನ ಮೊಹಮ್ಮದ್ ರಫೀಕ್ ಅದ್ನಾನ್ ತನ್ನ ತೂಕದ ಕಾರಣದಿಂದ ಸುದ್ದಿಯಲ್ಲಿದ್ದಾನೆ. ಆತ ಬರೋಬ್ಬರಿ 200 ಕೆಜಿ ತೂಗುತ್ತಿದ್ದು, ಆ ತೂಕವನ್ನು ಭರಿಸಲು ಆತ ದಿನದ ಮೂರು ಹೊತ್ತೂ ಊಟಕ್ಕೆ ಕುಳಿತುಕೊಳ್ಳುತ್ತಾನೆ. ಶ್ರೀಮಂತ ಕೃಷಿ ಕುಟುಂಬದಲ್ಲಿ ಹುಟ್ಟಿದ ರಫಿಗೆ ತಿನ್ನುವುದು ಒಂದು ಖಯಾಲಿ ಮತ್ತು ಅದು ಕಾಯಿಲೆ ಕೂಡಾ ಹೌದು!
ದಿನಕ್ಕೆ 3 ಹೊತ್ತು ತಿನ್ನುವ ರಫೀಕ್ ನ ಡಯಟ್ ಬಗ್ಗೆ ಕೇಳಿದರೆ ಬೆಚ್ಚಿ ಬೀಳುತ್ತೀರಿ. ಕಾಲಗಲಿಸಿ, ಹೊಟ್ಟೆ ಹರವಿ ಕೂತರೆ ಒಂದು ದೊಡ್ಡ ಸೋಫಾದ ಜಾಗ ಆತನಿಗೆ ಇಕ್ಕಟ್ಟಾಗುತ್ತದೆ. ಇರುವ ಇಬ್ಬರು ಹೆಂಡತಿಯರು ಒಬ್ಬೊಬ್ಬರಾಗಿ ಬಂದು ಬಡಿಸುತ್ತಿದ್ದರೆ, ಆತ ನಿರಂತರ ಪೇರಿಸುತ್ತಲೇ ಇರುತ್ತಾನೆ.
ವರದಿಯ ಪ್ರಕಾರ, ರಫೀಕ್ ದಿನಕ್ಕೆ 4 ಕೆಜಿ ಹಿಟ್ಟು ಮತ್ತು 2-3 ಕೆಜಿ ಅಕ್ಕಿಯಿಂದ ಮಾಡಿದ ಸುಮಾರು 80 ರೊಟ್ಟಿಗಳನ್ನು ಸೇವಿಸುತ್ತಾನೆ. ದಿನಕ್ಕೆ ಬರೋಬ್ಬರಿ 2-3 ಕೆಜಿ ಅನ್ನ ಮುಕ್ಕುತ್ತಾನೆ. 1-2 ಕೆಜಿ ಮಟನ್ ಅಥವಾ ಚಿಕನ್ ಅನ್ನು ಬಡಿದು ಹಾಕುತ್ತಾನೆ. ಜತೆಗೆ 2 ಕೆಜಿ ಬ್ರೆಡ್ ತಿಂದು, ಇದರೊಂದಿಗೆ 2 ಲೀಟರ್ ಹಾಲು ಕುಡಿದು ಡರ್ರನೆ ತೇಗಿದರೆ ಅದು ಆತನಿಗೆ ಒಂದು ಸಾಮಾನ್ಯ ಊಟ ಮಾಡಿದ ಹಾಗೆ !
ದೈನಿಕ್ ಭಾಸ್ಕರ್ ಪತ್ರಿಕೆ ವರದಿ ರಫೀಕ್ ಅವರ ತೂಕ 200 ಕೆಜಿ ಎಂದು ಹೇಳಲಾಗುತ್ತಿದೆ. ಈ ವರದಿಯ ಪ್ರಕಾರ, ಒಬ್ಬ ಹೆಂಡತಿಗೆ ರಫೀಕ್‌ನ ‘ ಡೋಸೇಜ್ ‘ ಗೆ ಅನುಗುಣವಾಗಿ ಆಹಾರ ಬೇಯಿಸಲು ಸಾಧ್ಯವಿಲ್ಲದೆ ಕೈ ಚೆಲ್ಲಿದ್ದಳು. ಆದ್ದರಿಂದ ಅವನು ಮತ್ತೊಂದು ಮದುವೆಯನ್ನು ಮಾಡಿಕೊಂಡ. ಹೆಂಡತಿಯರಿಬ್ಬರಿಗೂ ದಿನಪೂರ್ತಿ ಆತನಿಗೆ ಊಟ ತಯಾರಿಸುವುದೇ ಕೆಲಸ. ರಫೀಕ್ ದಿನಕ್ಕೆಒಟ್ಟು ಮೂರು ಬಾರಿ ತಿನ್ನುತ್ತಾನೆ. ಅವನಿಗೆ ಅಷ್ಟು ತುಂಬಾ ಹಸಿವು. ಆತ ಇಡೀ ಕುಟುಂಬದ ಆಹಾರದ 10 ಪಟ್ಟು ತಿನ್ನುತ್ತಾನೆ. ಆತನ ಕುಟುಂಬದಲ್ಲಿ 50 ಕೆಜಿಯ 1 ಚೀಲ ಅಕ್ಕಿ ಕೇವಲ ಏಳು ದಿನಗಳವರೆಗೆ ಉಳಿಯುವುದಿಲ್ಲವಂತೆ.
ರಫೀಕ್ 6 ಸಹೋದರಿಯರು ಮತ್ತು 4 ಸಹೋದರರಲ್ಲಿ ಕಿರಿಯ. ಅವರ ತಂದೆ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಮನೆಯಲ್ಲಿಯೇ ಇದ್ದರು. ಐದನೇ ತರಗತಿವರೆಗೆ ಓದಿದ ರಫೀಕ್ ಗೆ 15 ವರ್ಷದವನಿದ್ದಾಗ ಆತ 80 ಕೆಜಿ ತೂಕವಿದ್ದ, ಆದರೆ ಆ ಸಮಯದಲ್ಲಿ ನಾನು ಹೆಚ್ಚು ತೂಕವಿಲ್ಲದ ಕಾರಣ ಆಟವಾಡುತ್ತಿದ್ದ. ನಂತರ ಕ್ರಮೇಣ ಆತನ ಹಸಿವು ಹೆಚ್ಚಾಯಿತು ಮತ್ತು ತೂಕವೂ ಹೆಚ್ಚಾಯಿತು. ಹಾಗೇ ಆತ ಸಿಕ್ಕಿದ್ದನ್ನೆಲ್ಲ ತಿನ್ನಲು ಶುರುಮಾಡಿದ.
ಇದೀಗ ಆತ ಹತ್ತಿಪ್ಪತ್ತು ಹೆಜ್ಜೆ ಕೂಡ ಮುಂದಿಡಲಾರ. ಹೊರಗೆ ಹೋಗಬೇಕಾದರೆ ಆತನಿಗೆ ಬುಲೆಟ್ ಬೈಕ್ ಬೇಕೇಬೇಕು. ಸಾಮಾನ್ಯ ಬೈಕುಗಳು ಆತನ ಭಾರವನ್ನು ಎತ್ತಲಾರದೆ ಅಲ್ಲೇ ಜಗ್ಗಿ ಉಳಿದುಬಿಡುತ್ತವೆ. ಅದಕ್ಕಾಗಿ ಬುಲೆಟ್ ಬೈಕನ್ನು ಕೊಂಡಿದ್ದಾನೆ ರಫೀಕ್. ಈತನ ಅತಿಯಾದ ತೂಕದಿಂದ ಇತ್ತೀಚೆಗೆ ಆತನ ಬುಲೆಟ್ ಕೂಡ ಸುಸ್ತಾಗಿ ಮಧ್ಯದಲ್ಲಿ ನಿಂತು ಬಿಡುವುದಿದೆ.
ಆತನ ಊಟದ ಅಗಾಧತೆಯ ಬಗ್ಗೆ ಅರಿವು ಇರುವವರು ಜನರು ಅವನನ್ನು ಮದುವೆಗೆ ಆಹ್ವಾನಿಸುವುದಿಲ್ಲ. ಯಾಕೆಂದ್ರೆ ಅಲ್ಲಿ ಒಂದುಕಡೆಯಿಂದ ಬಡಿಸಿಕೊಂಡು ಬಂದಷ್ಟು, ಆತ ಒಂದೊಂದಾಗಿ ಪೋಣಿಸುತ್ತಲೆ ಹೋಗುತ್ತಾನೆ. ಬಡಿಸಿ ಆಕಡೆ ತಿರುಗಿದ ಕೂಡಲೇ ಪ್ಲೇಟ್ ಖಾಲಿ. ಆತನ ಸಹವಾಸವೇ ಬೇಡವೆಂದು ಆತನನ್ನು ಸಮಾರಂಭಗಳಿಗೆ ಕರೆಯುವುದನ್ನು ಅಲ್ಲಿನ ಊರವರು ಬಿಟ್ಟಿದ್ದಾರೆ.
ಅವನು ಯಾವಾಗಲೂ ಹಸಿವಿನಿಂದ ಇರುವುದಕ್ಕೆ ಕಾರಣ ಬುಲಿಮಿಯಾ ನರ್ವೋಸಾ ಎಂಬ ಆಹಾರದ ಅಸ್ವಸ್ಥತೆ ಎಂದು ವೈದ್ಯರು ಹೇಳಿದ್ದಾರೆ. ತಿನ್ನುವ ಅಸ್ವಸ್ಥತೆಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಅನೋರೆಕ್ಸಿಯಾ ನರ್ವೋಸಾ ಮತ್ತು ಎರಡನೆಯದು ಬುಲಿಮಿಯಾ ನರ್ವೋಸಾ. ಅನೋರೆಕ್ಸಿಯಾ ನರ್ವೋಸಾದಲ್ಲಿ, ರೋಗಿಯು ತನ್ನನ್ನು ತೆಳ್ಳಗೆ ಇಡಲು ಬಯಸುತ್ತಾನೆ ಮತ್ತು ಇದಕ್ಕಾಗಿ ಅವನು ಬಹಳ ಚಿಂತನಶೀಲವಾಗಿ ತಿನ್ನುತ್ತಾನೆ. ಆದರೆ ಬುಲಿಮಿಯಾ ನರ್ವೋಸಾದಲ್ಲಿ, ರೋಗಿಯ ಗಮನವು ಎಲ್ಲಾ ಸಮಯದಲ್ಲೂ ತಿನ್ನುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ತಿಂದ ನಂತರ ತನ್ನ ಹೆಚ್ಚಿದ ತೂಕದ ಬಗ್ಗೆ ನಾಚಿಕೆಪಡುತ್ತಾನೆ. ಆತನ ಬುಲಿಮಿಯಾ ನರ್ವೋಸಾ ಕಾಯಿಲೆಗೆ ತಕ್ಷಣ ಚಿಕಿತ್ಸೆ ಕೊಡಿಸಲೇಬೇಕು ಇಲ್ಲದೆ ಹೋದರೆ ಜೀವಕ್ಕೆ ಅಪಾಯ ಎಂದಿದ್ದಾರೆ ಆರೋಗ್ಯ ತಜ್ಞರು.