ಆಸ್ತಿ ತೆರಿಗೆ ಪಾವತಿಗೆ ಅಲೆದಾಡಬೇಕಿಲ್ಲ | ಎಲ್ಲಾ ನಗರಗಳಲ್ಲೂ ಬರಲಿದೆ ‘ಡಿಜಿಟಲ್ ಪೇ’ ಸೌಲಭ್ಯ | ತಪ್ಪಲಿದೆ ಜನರ ಕಚೇರಿ ಅಲೆದಾಟ !!!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರು ಇನ್ನು ಮುಂದೆ ಆಸ್ತಿ ತೆರಿಗೆ, ಸೇವಾ ಶುಲ್ಕಗಳನ್ನು ಕುಳಿತಲ್ಲೇ ಆನ್‌ಲೈನ್ ಮೂಲಕ ಪಾವತಿಸುವ ಏಕರೂಪ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ.

ಪೌರಾಡಳಿತ ಇಲಾಖೆ ಈ ಬಗ್ಗೆ ಎಲ್ಲಾ‌ ಕ್ರಮ ಕೈಗೊಳ್ಳಲು ರೆಡಿಯಾಗಿದೆ. ‘ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್’ ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನಾನಾ ಸೇವೆಗಳಿಗೆ ಸಂಬಂಧಪಟ್ಟಂತೆ ಯಾವುದೇ ಶುಲ್ಕವನ್ನು ಆನ್‌ಲೈನ್ ಮೂಲಕ ಮೊಬೈಲ್ ಇಲ್ಲವೇ ಕಂಪ್ಯೂಟರ್ ನೆರವಿನಿಂದ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಜನರಿಗೆ ಸಮಯ ಉಳಿತಾಯವಾಗಲಿದೆ. ಎಲ್ಲ ಸೇವಾ ಶುಲ್ಕವನ್ನು ಸಕಾಲದಲ್ಲಿ ಸಂಗ್ರಹಿಸಿ ಸಂಪನ್ಮೂಲ ಕ್ರೋಡೀಕರಣಕ್ಕೆ ನೆರವಾಗಲಿದೆ ಎಂಬುದು ಇಲಾಖೆಯ ಲೆಕ್ಕಾಚಾರ. ಹೀಗಾಗಿ ರಾಜ್ಯದ 10 ಮಹಾನಗರ ಪಾಲಿಕೆಗಳನ್ನು ಒಳಗೊಂಡ 312 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ಪಾವತಿ ವ್ಯವಸ್ಥೆ ಜಾರಿಗೆ ತರಲು ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ ರಾಜ್ಯದ 10 ಮಹಾನಗರ ಪಾಲಿಕೆಗಳನ್ನು ಒಳಗೊಂಡ 312 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ಪಾವತಿ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆದಿದೆ. ಬಿಬಿಎಂಪಿಯಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದೆ.

ಸೇವಾ ಶುಲ್ಕದ ಚಲನ್ ಅನ್ನು ಆನ್‌ಲೈನ್ ಮೂಲಕವೇ ಸೃಜಿಸಿಕೊಂಡು ಕುಳಿತಲ್ಲೇ ಶುಲ್ಕ ಪಾವತಿಸಬಹುದಾಗಿದೆ.

ಶುಲ್ಕ ಪಾವತಿ- ವರ್ಗಾವಣೆ ಸಂಬಂಧ ‘ಆಕ್ಸಿಸ್ ಬ್ಯಾಂಕ್’ ಹಾಗೂ ‘ಬ್ಯಾಂಕ್ ಆಫ್ ಬರೋಡಾ’ ಜತೆಗೆ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ಆನ್‌ಲೈನ್ ಮೂಲಕ ಪಾವತಿಯಾದ ಶುಲ್ಕ ತಕ್ಷಣ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಖಾತೆಗೆ ಜಮೆಯಾಗಲಿದೆ. ಯಾವುದೇ ರೀತಿಯ ಸೇವಾಶುಲ್ಕ ವಿಧಿಸದೆ ಉಚಿತವಾಗಿ ಸೇವೆ ಒದಗಿಸಲು ಮುಂದಾದ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಶುಲ್ಕದ ಮೊತ್ತ ವರ್ಗಾವಣೆಯಲ್ಲಿ ಅನಗತ್ಯ ವಿಳಂಬ, ಅವ್ಯವಹಾರಕ್ಕೆ ಅವಕಾಶ ಇಲ್ಲದಂತಾಗಲಿದೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆ ಜಾರಿಯಾಗಿದ್ದು, ಯಶಸ್ವಿಯಾಗಿ ಬಳಕೆಯಾಗಿದೆ. ಸುಧಾರಿತ ವ್ಯವಸ್ಥೆ ಬಳಕೆ, ಚಲನ್ ಸೃಷ್ಟಿ, ಆನ್‌ಲೈನ್ ಮೂಲಕ ಶುಲ್ಕ
ಪಾವತಿ ಸಂಬಂಧ ಇಲ್ಲಿಯವರೆಗೆ ದೂರು ಬಂದಿಲ್ಲ. ಜತೆಗೆ ಆಯಾ ದಿನ ಸಂಗ್ರಹವಾದ ಶುಲ್ಕ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗೆ ತ್ವರಿತವಾಗಿ ವರ್ಗಾವಣೆಯಾಗಿರುವ ಬಗ್ಗೆಯೂ ಖಾತರಿಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಯೋಗಿಕ ಜಾರಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಏಕರೂಪದ ವ್ಯವಸ್ಥೆ ತರಲು ಪ್ರಯತ್ನ ನಡೆದಿದೆ. ತುಮಕೂರು, ಮಂಗಳೂರು ಸೇರಿದಂತೆ ಕೆಲ ಮಹಾನಗರ ಪಾಲಿಕೆಗಳು ಸುಧಾರಿತ ತಂತ್ರಜ್ಞಾನ
ಅಳವಡಿಸಿಕೊಂಡು ಆನ್‌ಲೈನ್ ಮೂಲಕ ತೆರಿಗೆ ಸೇರಿದಂತೆ ಇತರೆ ಶುಲ್ಕ ಸಂಗ್ರಹ ವ್ಯವಸ್ಥೆ ಅಳಡಿಸಿಕೊಂಡಿವೆ. ಆದರೆ ಮುಂದೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಏಕರೂಪದ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

Leave A Reply

Your email address will not be published.