ಉಡುಪಿ: ಕೋಡಿ ಕಡಲತೀರದಲ್ಲಿ ಟಾರ್ ಚೆಂಡುಗಳು ಪತ್ತೆ !! | ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿ ಕಡಲತೀರದ ಪ್ರದೇಶದಲ್ಲಿ ಟಾರ್ ಚೆಂಡುಗಳು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.
ಟಾರ್ ಬಾಲ್ ಗಳಿಂದ ಸಮುದ್ರದ ನೀರು ಎಣ್ಣೆಮಯವಾಗುತ್ತಿರುವುದು ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ವೃತ್ತಿಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಹಾಗೂ ಪರಿಸರ ಹೋರಾಟಗಾರನಾಗಿರುವ ಡಾ.ದುರ್ಗಾಪ್ರಸಾದ್ ಹೆಗಡೆ ಅವರು ಈ ಕುರಿತು, ‘ಕೋಡಿ ಕಡಲತೀರದಲ್ಲಿ ಸಮುದ್ರದ ನೀರು ಎಣ್ಣೆ ಮಿಶ್ರಿತವಾಗಿರುವುದು ಆತಂಕದ ವಿಚಾರವಾಗಿದೆ. ಬೀಚ್‌ಗೆ ಭೇಟಿ ನೀಡುವ ಕೆಲವು ಪ್ರವಾಸಿಗರು ಚರ್ಮದ ಸಮಸ್ಯೆ ಮತ್ತು ತುರಿಕೆ ಅನುಭವಿಸುತ್ತಿದ್ದಾರೆ. ಇದು ಸಮುದ್ರ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ’ ಎಂದು ಹೇಳಿದ್ದಾರೆ.
ಕುಂದಾಪುರ ವಿಭಾಗದ ಡಿಸಿಎಫ್ ಆಶಿಶ್ ರೆಡ್ಡಿ ಎಂವಿ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಸಂರಕ್ಷಣಾ ಕಾಯ್ದೆಯಡಿ ಈ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬೆಳವಣಿಗೆಯನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.