ಬಿ.ಜೆ.ಪಿ ಹಿರಿಯ ಮುಖಂಡ-ಅಮಾಸೆಬೈಲು ಅಭಿವೃದ್ಧಿಯ ಹರಿಕಾರ ಎ.ಜಿ ಕೊಡ್ಗಿ ಇನ್ನಿಲ್ಲ

ಬಿಜೆಪಿಯ ಹಿರಿಯ ಮುಖಂಡ, ಅಮಾಸೆಬೈಲಿನ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿದ್ದ ಎ.ಜಿ.ಕೊಡ್ಗಿ (93) ಅವರು ಇಂದು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಬೈಂದೂರು ಶಾಸಕರಾಗಿದ್ದ ಕೊಡ್ಗಿ ಅವರು, 1993 ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಆಡಳಿತದಲ್ಲಿ ಮೂರನೇ ಹಣಕಾಸು ಆಯೋಗ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಪ್ರಗತಿಪರ ಕೃಷಿ, ಸೌರ ವಿದ್ಯುತ್, ಗ್ರಾಮೀಣಾಭಿವೃದ್ಧಿ, ನದಿ ಜೋಡಣೆ ಇವರ ಆಸಕ್ತಿಯ ಕ್ಷೇತ್ರಗಳಾಗಿದ್ದು, ತನ್ನೂರು ಅಮಾಸೆಬೈಲಿನ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಅಮಾಸೆಬೈಲು ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ದೇವರಾಜ ಅರಸು ಕಾಲದಲ್ಲಿ ಭೂಮಸೂದೆ ಕಾನೂನು ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದರು. 2013ರಲ್ಲಿ ರಾಜಕೀಯ ನಿವೃತ್ತಿ ಹೊಂದಿ ಸಂಪೂರ್ಣ ಗ್ರಾಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೊಡ್ಗಿ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Leave A Reply

Your email address will not be published.