ತನ್ನ ಬೈಕ್ ಗೆ ದಂಡ ಹಾಕಿದ ಕೋಪದಲ್ಲಿ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಲೈನ್‌ಮ್ಯಾನ್

ಪೊಲೀಸರು ತನ್ನ ಬೈಕ್ ಗೆ ದಂಡ ಹಾಕಿದರೆಂಬ ಕೋಪದಲ್ಲಿ ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಒಬ್ಬರು ಪೊಲೀಸ್‌ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯ ಹರ್ದಾಸ್‌ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲೈನ್‌ಮ್ಯಾನ್ ಒಬ್ಬರಿಗೆ ದಂಡ ಹಾಕಿದ್ದಾರೆ, ಈ ಕಾರಣದಿಂದ ಕೋಪದಲ್ಲಿ ಠಾಣೆಯ ಕರೆಂಟನ್ನು ಕಟ್ ಮಾಡಿದ್ದು, ರಾತ್ರಿಯಿಡೀ ಪೊಲೀಸರು ಕರೆಂಟ್ ಇಲ್ಲದೆ ಪೇಚಾಡಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.

ಶನಿವಾರ ರಾತ್ರಿಯೇ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಬಗ್ಗೆ ವಿದ್ಯುತ್ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎನ್ಎಸ್ ವರದಿ ಮಾಡಿದೆ.

ಇನ್ಸ್ಪೆಕ್ಟರ್ ಮೋದಿ ಸಿಂಗ್ ಅವರು ವಾಹನ ತಪಾಸಣೆ ಮಾಡುತ್ತಿದ್ದಾಗ ಲೈನ್‌ಮ್ಯಾನ್ ಆದ ಭಗವಾನ್ ಸ್ವರೂಪ್ ಎಂಬವರ ಬೈಕ್ ನಿಲ್ಲಿಸಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದ್ದಾರೆ. ಸ್ವರೂಪ್ ತನ್ನ ಬಳಿ ಕಾಗದಪತ್ರಗಳಿಲ್ಲ ಎಂದಿದ್ದಾರೆ. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳದ ಇನ್ಸ್‌ಪೆಕ್ಟರ್ ರೂ.500 ದಂಡವನ್ನು ಹಾಕಿದ್ದಾರೆ.

ಈ ಘಟನೆಯಿಂದ ಸ್ವರೂಪ್ ಕೋಪಗೊಂಡಿದ್ದು, ವಿದ್ಯುತ್ ಇಲಾಖೆಯ ತನ್ನ ಸಹೋದ್ಯೋಗಿಗಳನ್ನು ಸಂಪರ್ಕಿಸಿ, ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಪೊಲೀಸ್ ಠಾಣೆಯ ವಿದ್ಯುತ್ ಮೀಟರ್ ನಲ್ಲಿ ಕೊರತೆಯಿದೆ, ಆದ್ದರಿಂದ ವಿದ್ಯುತ್ ಸಂಪರ್ಕ ಕಾನೂನುಬಾಹಿರವಾಗಿದೆ ಎಂದು ಸ್ವರೂಪ್ ತಿಳಿಸಿರುವುದಾಗಿ ವರದಿಯಾಗಿದೆ

Leave A Reply

Your email address will not be published.