ಅಂಧರೂ ಕೂಡ ಸುಲಭವಾಗಿ ಗುರುತಿಸುವಂತಹ ಹೊಸ ನಾಣ್ಯಗಳನ್ನು ಲೋಕಾರ್ಪಣೆ ಮಾಡಿದ ನರೇಂದ್ರ ಮೋದಿ
ಅಂಧರೂ ಕೂಡ ಸುಲಭವಾಗಿ ಗುರುತಿಸುವಂತಹ 1, 2, 5, 10 ಹಾಗೂ 20 ರೂ. ಮುಖಬೆಲೆಯ 5 ಹೊಸ ನಾಣ್ಯಗಳನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದಾರೆ.
ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಐದು ಹೊಸ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇವುಗಳ ಮೇಲೆ ‘ಆಜಾದಿ ಕಾ ಅಮೃತ ಮಹೋತ್ಸವ’ ಎಂದು ವಿನ್ಯಾಸ ಮಾಡಲಾಗಿದೆ. ಇವುಗಳು ಸ್ಮರಣಾರ್ಥ ನಾಣ್ಯಗಳಲ್ಲ ಬದಲಾಗಿ ಚಲಾವಣೆಗೆಂದೇ ಇವುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ‘ಐಕಾನಿಕ್ ವೀಕ್ ಸೆಲೆಬ್ರೇಷನ್ಸ್’ನನ್ನು ಮೋದಿ ಅವರು ಉದ್ಘಾಟಿಸಿದರು. ಈ ವೇಳೆ ಅವರು, 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೋದಿ ಅವರು ವಿಶೇಷ ಸರಣಿಯ ರೂ. 1, 2, 5, 10 ಮತ್ತು 20 ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆ ಮಾಡಿದರು.
ಹೊಸ ಸರಣಿಯ ನಾಣ್ಯಗಳು ಅಮೃತ್ ಕಲ್ ಗುರಿಯನ್ನು ಜನರಿಗೆ ನೆನಪಿಸುತ್ತವೆ. ದೇಶದ ಅಭಿವೃದ್ಧಿಗೆ ಕೆಲಸ ಮಾಡಲು ಜನರನ್ನು ಪ್ರೇರೇಪಿಸುತ್ತವೆ. ಇದೇ ವೇಳೆ ಮೋದಿ ಅವರು 12 ಸರ್ಕಾರಿ ಯೋಜನೆಗಳ ಕ್ರೆಡಿಟ್-ಲಿಂಕ್ಡ್ ಪೋರ್ಟಲ್ ‘ಜನ್ ಸಮರ್ಥ್ ಪೋರ್ಟಲ್’ ಸಹ ಪ್ರಾರಂಭಿಸಿದರು.