ಪ್ರವಾದಿ ಮುಹಮ್ಮದ್ ನಿಂದನೆ ವಿವಾದ : ಸೌದಿ ಅರೇಬಿಯಾದ ಸೂಪರ್ ಸ್ಟೋರ್ ಗಳಲ್ಲಿ ಭಾರತದ ಉತ್ಪನ್ನಕ್ಕೆ “ನೋ ಎಂಟ್ರಿ”

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಭಾರೀ ಗಲಭೆ ನಡೆದಿದ್ದು, ಇದೀಗ ಈ ವಿವಾದ ಸೌದಿ ಅರೇಬಿಯಾಗೂ ತಲುಪಿದೆ. ಪ್ರವಾದಿ ನಿಂದನೆ ಕಾರಣದಿಂದ ಸೌದಿ ಸ್ಟೋರ್‌ಗಳಲ್ಲಿ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಭಾರತ ರಾಯಭಾರಿ ಅಧಿಕಾರಿಗಳು ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಸೌದಿ ಅರೇಬಿಯಾ, ಬಹ್ರೇನ್ ಹಾಗು ಕುವೈಟ್ ಸೂಪರ್‌ಸ್ಟೋರ್ಸ್‌ಗಳಿಂದ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸೌದಿ ವಿದೇಶಾಂಗ ಸಚಿವಾಲಯ ಕಚೇರಿಯಲ್ಲಿ ಸಭೆ ಸೇರಿ ಭಾರತದ ನಿಲುವು ಸ್ಪಷ್ಟಪಡಿಸಿದ್ದಾರೆ.

ಪ್ರವಾದಿ ಮೊಹಮ್ಮದ್ ನಿಂದನೆ ಹೇಳಿಕೆ, ಟ್ವೀಟ್‌ಗಳು ಭಾರತ ಸರ್ಕಾರದ ನಿಲುವಲ್ಲ. ಕೆಲ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ. ಜನಪ್ರತಿನಿಧಿ ಹೇಳಿಕೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಟ್ವೀಟ್ ಮುಂದಿಟ್ಟುಕೊಂಡು ಇದು ಭಾರತ ಸರ್ಕಾರದ ನಿಲುವು ಎಂದು ನಿರ್ಧಾರ ತೆಗೆದುಕೊಳ್ಳುವುದು ಸಮಂಜವಲ್ಲ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮಕ್ಕೂ ಗೌರವವಿದೆ. ನಿಯಮ ಉಲ್ಲಂಘನೆ ಮಾಡಿದವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

ಈ ರೀತಿಯ ನಿಂದನೆ ಕಮೆಂಟ್, ಅವಹೇಳನವನ್ನು ಭಾರತ ಸರ್ಕಾರ ಎಂದಿಗೂ ಬೆಂಬಲಿಸುವುದಿಲ್ಲ. ಇದರ ಪರವಾಗಿಯೂ ಇಲ್ಲ. ನಮ್ಮ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಇಂತಹ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿದ್ದಾರೆ. ರಾಯಭಾರಿ ಕಚೇರಿ ಅಧಿಕಾರಗಳ ಮಧ್ಯಪ್ರವೇಶದಿಂದ ಸೌದಿ ಅರೇಬಿಯಾದಲ್ಲಿ ಪರಿಸ್ಥಿತಿ ತಿಳಿಗೊಂಡಿದೆ.

ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಟೀವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್‌ರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರದ ನಮಾಜ್ ನಂತರ ಒಂದು ಗುಂಪಿನವರು ಕಾನ್ಪುರದ ಪರೇಡ್, ನಯಿ ಸಡಕ್ ಹಾಗೂ ಯತೀಮ್‌ಖಾನಾ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳ ಮೇಲೆ ಬಾಂಬ್ ಎಸೆದು, ಕಲ್ಲು ತೂರಾಟ ನಡೆಸಿ, ಸುತ್ತಮುತ್ತಲಿನ ಅಂಗಡಿಗಳ ಮೇಲೂ ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

Leave A Reply

Your email address will not be published.