ಗೋ ಹತ್ಯೆ ಪ್ರಕರಣದ ಆರೋಪಿಗೆ ಗೋಶಾಲೆಯಲ್ಲಿ ಕೆಲಸ ಮಾಡುವಂತೆ ಷರತ್ತು ವಿಧಿಸಿ ಜಾಮೀನು ನೀಡಿದ ಹೈಕೋರ್ಟ್ !!

ಗೋ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗೆ ಹೈಕೋರ್ಟ್ ಅಚ್ಚರಿಯ ತೀರ್ಪು ನೀಡಿದೆ. ಆರೋಪಿಗೆ ಗೋ ಶಾಲೆಯಲ್ಲಿ ಒಂದು ತಿಂಗಳು ಗೋವುಗಳ ಸೇವೆ ಮಾಡುವಂತೆ ಷರತ್ತು ವಿಧಿಸಿ ಅಲಹಾಬಾದ್ ಹೈಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದೆ.

ಸಲೀಂ ಅಲಿಯಾಸ್ ಕಾಲಿಯಾ ಗೋ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆ ಬಳಿಕ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಆರೋಪಿ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡಬೇಕು ಮತ್ತು ನೋಂದಾಯಿತ ಗೋಶಾಲೆಗೆ 1 ಲಕ್ಷ ರೂ. ದಂಡ ಕಟ್ಟಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಸಲೀಂ ವಿರುದ್ಧ ಐಪಿಸಿ ಸೆಕ್ಷನ್ 379 ಕಳ್ಳತನ ಮತ್ತು ಉತ್ತರ ಪ್ರದೇಶ ಗೋ ಹತ್ಯೆ ತಡೆ ಕಾಯ್ದೆಯಡಿ ಬರೈಲಿ ಜಿಲ್ಲೆಯ ಬೊಜಿಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಆ ಬಳಿಕ ಜಾಮೀನು ಅರ್ಜಿ ಸಲ್ಲಿಸಿ ಕೋರ್ಟ್ ನಲ್ಲಿ ಸಲೀಂ ಪರ ವಾದಿಸಿದ ವಕೀಲರು, ಸಲೀಂ ಮುಗ್ಧ ಆತ ಮತ್ತು ಆತನ ಸಹಚರರು ಬಂಧನದ ಬಳಿಕ ಗೊಂದಲದ ಹೇಳಿಕೆ ನೀಡಿದ್ದಾರೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಬರೈಲಿ ಗೋ ಶಾಲೆಗೆ 1 ಲಕ್ಷ ರೂ. ದಂಡ ಕಟ್ಟಲಾಗುವುದು ಹಾಗೂ ಒಂದು ತಿಂಗಳ ಕಾಲ ಗೋವುಗಳ ಸೇವೆ ಮಾಡುವುದಾಗಿ ವಾದ ಮಂಡಿಸಿದರು.

ಆ ಬಳಿಕ ಕೋರ್ಟ್ ಈ ಬಗ್ಗೆ ಅರ್ಜಿದಾರನಿಂದ ವೈಯಕ್ತಿಕ ಬಾಂಡ್ ಹಾಗೂ ಎರಡು ಶ್ಯೂರಿಟಿ ಪಡೆದುಕೊಂಡು ಜಾಮೀನು ಮಂಜೂರು ಮಾಡಿದೆ. ಗೋ ಶಾಲೆಯಲ್ಲಿ ಕೆಲಸ ಮಾಡಿದ ಮತ್ತು ಕಟ್ಟಿರುವ ಹಣದ ಬಗ್ಗೆ ದಾಖಲೆ ಕೋರ್ಟ್ ಗೆ ಸಲ್ಲಿಸುವಂತೆ ಆದೇಶಿಸಿದೆ.

ಇತ್ತೀಚಿನ ದಿನಗಳಲ್ಲಿ ಆರೋಪಿಗಳಿಗೆ ಅವರ ತಪ್ಪಿನ ಅರಿವಾಗುವಂತಹ ಶಿಕ್ಷೆ ನೀಡುತ್ತಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ರಾಜ್ಯವು ಇದೀಗ ದೇಶಾದ್ಯಂತ ಜನ ಮನ್ನಣೆಗೆ ಪಾತ್ರವಾಗುತ್ತಿದೆ.

Leave A Reply

Your email address will not be published.