LPG ಸಬ್ಸಿಡಿ ನಿಯಮದಲ್ಲಿ ಬದಲಾವಣೆ!!!

ಎಲ್‌ಪಿಜಿ ದರ ಏರಿಕೆ, ಇಳಿಕೆಯಾಗುತ್ತ ಗ್ರಾಹಕರನ್ನು ಕಂಗಾಲಾಗಿಸಿದ್ದು, ಮತ್ತೆ ಮತ್ತೆ ಕೇಂದ್ರ ಸರ್ಕಾರ ಶಾಕ್ ನೀಡುತ್ತಲೇ ಬಂದಿದೆ. ಇದೀಗ ಅಡುಗೆ ಅನಿಲ ದರವು ಒಂದು ಸಾವಿರ ರೂಪಾಯಿವರೆಗೂ ದಾಟಿದ್ದು, ಈ ಬೆಲೆ ಏರಿಕೆಗೆ ಕೊಂಚ ರಿಲೀಫ್ ಎಂಬಂತೆ ಕೇಂದ್ರ ಸರ್ಕಾರ ಎಲ್‌ಪಿಜಿ ಸಬ್ಸಿಡಿ ಘೋಷಣೆ ಮಾಡಿತ್ತು. ಆದರೆ ಈಗ ಎಲ್‌ಪಿಜಿ ಸಬ್ಸಿಡಿ ನಿಯಮವನ್ನೇ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ತೈಲ ಕಾರ್ಯದರ್ಶಿ ಪಂಕಜ್ ಜೈನ್, “ಎಲ್‌ಪಿಜಿ ಸಬ್ಸಿಡಿ ಸೀಮಿತ ಫಲಾನುಭವಿಗಳಿಗೆ ಮಾತ್ರ ಲಭ್ಯವಿದ್ದು, ಉಳಿದ ಬಳಕೆದಾರರು ಮಾರುಕಟ್ಟೆ ಬೆಲೆಯನ್ನು ಪಾವತಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ. ಜೂನ್ 2020 ರಿಂದ ಅಡುಗೆ ಅನಿಲದ ಮೇಲೆ ಯಾವುದೇ ಸಬ್ಸಿಡಿಯನ್ನು ಪಾವತಿಸಲಾಗಿಲ್ಲ. ಮಾರ್ಚ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಸಬ್ಸಿಡಿಯನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಸಂಪರ್ಕ ಪಡೆದ ಒಂಬತ್ತು ಕೋಟಿ ಬಡ ಮಹಿಳೆಯರು ಮತ್ತು ಇತರ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲದ ಮೇಲಿನ ಎಲ್‌ಪಿಜಿ ಸಬ್ಸಿಡಿ ಲಭ್ಯವಿದೆ. “ಕೋವಿಡ್‌ನ ಆರಂಭಿಕ ದಿನಗಳಿಂದಲೂ ಎಲ್‌ಪಿಜಿ ಬಳಕೆದಾರರಿಗೆ ಯಾವುದೇ ಸಬ್ಸಿಡಿ ಇರಲಿಲ್ಲ. ಅಂದಿನಿಂದ ಉಜ್ವಲಾ ಫಲಾನುಭವಿಗಳಿಗೆ ಈಗ ಪರಿಚಯಿಸಲಾದ ಸಬ್ಸಿಡಿ ಮಾತ್ರ ಇದೆ,” ಎಂದು ಹೇಳಿದ್ದಾರೆ.

ಒಂಬತ್ತು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸಬ್ಸಿಡಿ
ಇತ್ತೀಚೆಗೆ, ಸಬ್ಸಿಡಿ ನಿರ್ಧಾರವನ್ನು ಪ್ರಕಟಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಟ್ವೀಟ್ ಮಾಡಿದ್ದರು. ‘ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಒಂಬತ್ತು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನಾವು ಪ್ರತಿ ಗ್ಯಾಸ್ ಸಿಲಿಂಡರ್‌ಗೆ (12 ಸಿಲಿಂಡರ್‌ಗಳವರೆಗೆ) 200 ರೂಪಾಯಿ ಸಬ್ಸಿಡಿ ನೀಡುತ್ತೇವೆ. ಇದು ನಮ್ಮ ತಾಯಿ ಮತ್ತು ಸಹೋದರಿಯರಿಗೆ ಸಹಾಯ ಮಾಡುತ್ತದೆ. ಇದು ವರ್ಷಕ್ಕೆ ಸುಮಾರು 6,100 ಕೋಟಿ ರೂಪಾಯಿಗಳ ಆದಾಯದ ಮೇಲೆ ಪ್ರಭಾವ ಬೀರುತ್ತದೆ,’ ಎಂದು ತಿಳಿಸಿದ್ದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು, ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಸೀಮೆಎಣ್ಣೆ, ಕಲ್ಲಿದ್ದಲು, ಕಟ್ಟಿಗೆ ಮೊದಲಾದವುಗಳನ್ನು ಬಳಕೆ ಮಾಡುತ್ತಿದ್ದ ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್‌ಪಿಜಿಯಂತಹ ಶುದ್ಧ ಅಡುಗೆ ಇಂಧನಗಳನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಮೇ 2016 ರಲ್ಲಿ ಪರಿಚಯಿಸಲಾಯಿತು. ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ ಎಂಬ ನಿಟ್ಟಿನಲ್ಲಿ ಯೋಜನೆ ಜಾರಿಗೆ ತರಲಾಯಿತು. ಪಿಎಂಯುವೈನ ವೆಬ್‌ಸೈಟ್ ಪ್ರಕಾರ, ಯೋಜನೆಯಡಿಯಲ್ಲಿ 9.17 ಕೋಟಿಗೂ ಹೆಚ್ಚು ಎಲ್‌ಪಿಜಿ ಸಂಪರ್ಕಗಳನ್ನು ಬಿಡುಗಡೆ ಮಾಡಲಾಗಿದೆ. ದೇಶವು ಸುಮಾರು 30.5 ಕೋಟಿ ಎಲ್‌ಪಿಜಿ ಸಂಪರ್ಕವನ್ನು ಹೊಂದಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪಡೆಯಲಿರುವ ಅರ್ಹತೆ :
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಎಸ್‌ಸಿ ಕುಟುಂಬಗಳು, ಎಸ್‌ಟಿ ಕುಟುಂಬಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು, ಅತ್ಯಂತ ಹಿಂದುಳಿದ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆ, ಅಂತ್ಯೋದಯ ಅನ್ನ ಯೋಜನೆ (ಎಎವೈ) ಫಲಾನುಭವಿಗಳು, ಬುಡಕಟ್ಟುಗಳು, ಅರಣ್ಯ ನಿವಾಸಿಗಳು, ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು, SECC ಕುಟುಂಬಗಳು (AHL TIN), 14-ಅಂಶಗಳ ಘೋಷಣೆಯ ಪ್ರಕಾರ ಬಡ ಕುಟುಂಬಗಳು ಅರ್ಹರಾಗಿದ್ದಾರೆ. ಅರ್ಜಿದಾರರಿಗೆ 18 ವರ್ಷ ವಯಸ್ಸಾಗಿರಬೇಕು. ಒಂದೇ ಮನೆಯಲ್ಲಿ ಬೇರೆ ಯಾವುದೇ ಎಲ್‌ಪಿಜಿ ಸಂಪರ್ಕ ಇರಬಾರದು.

ಸಬ್ಸಿಡಿ ಘೋಷಣೆಯ ಮೊದಲು, ಉಜ್ವಲ ಯೋಜನೆಯ ಫಲಾನುಭವಿಗಳು ಸೇರಿದಂತೆ ಎಲ್ಲಾ ಎಲ್‌ಪಿಜಿ ಬಳಕೆದಾರರು ಮಾರುಕಟ್ಟೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿಯನ್ನು ಜೂನ್ 2020 ರಲ್ಲಿ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ 14.2-ಕೆಜಿ ಎಲ್‌ಪಿಜಿ ಸಿಲಿಂಡರ್ ಮಾರುಕಟ್ಟೆ ಬೆಲೆಯು 1,003 ರೂಪಾಯಿ ಆಗಿದೆ. ಇದೀಗ, ಸರ್ಕಾರದ ಇತ್ತೀಚಿನ ನಿರ್ಧಾರದ ನಂತರ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ, ಪ್ರತಿ ಸಿಲಿಂಡರ್‌ಗೆ ರೂ 200 ರ ಸಬ್ಸಿಡಿಯನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಆದ್ದರಿಂದಾಗಿ 14.2 ಕೆಜಿ ಸಿಲಿಂಡರ್‌ಗೆ ರೂ 803 ಆಗಿರುತ್ತದೆ.

Leave A Reply

Your email address will not be published.