ಎಣ್ಣೆ ಪ್ರಿಯರಿಗೆ ಇಲ್ಲಿದೆ ಕಿಕ್ಕೇರಿಸುವ ನ್ಯೂಸ್ | ರಾಜ್ಯದಲ್ಲಿ ಶೀಘ್ರವೇ ಅಗ್ಗವಾಗಲಿದೆ ದುಬಾರಿ ಮದ್ಯದ ಬೆಲೆ!

ಬೆಂಗಳೂರು :ಎಲ್ಲವೂ ಸುಸೂತ್ರವಾಗಿ ನಡೆದರೆ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯ ಅಗ್ಗವಾಗಲಿದ್ದು, ಈ ಮೂಲಕ ಎಣ್ಣೆ ಪ್ರಿಯರಿಗೆ ಸಿಹಿಸುದ್ದಿ ಸಿಗಲಿದೆ.

ರಾಜ್ಯ ಅಬಕಾರಿ ಇಲಾಖೆಯು ಇತರ ರಾಜ್ಯಗಳಲ್ಲಿನ ಮದ್ಯದ ದರದ ಮಾದರಿಯನ್ನು ಅಧ್ಯಯನ ಮಾಡಿದ ನಂತರ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡಲು ಯೋಜಿಸುತ್ತಿದೆ. ಇದರಿಂದ ಮದ್ಯ ಮಾರಾಟ ಹೆಚ್ಚಳವಾಗುವ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಆದಾಯದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

2021-22ರಲ್ಲಿ ಮದ್ಯದಿಂದ 24,580 ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ ಗುರಿ ಮೀರಿ 26,276.83 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 29,000 ರೂ. ಆದಾಯ ಸಂಗ್ರಹ ಗುರಿ ನೀಡಿದ್ದಾರೆ.

ಕರ್ನಾಟಕವು ಮದ್ಯದ ಬಳಕೆಯಲ್ಲಿ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಮದ್ಯದಿಂದ ದಿನಕ್ಕೆ ಸರಾಸರಿ 75 ಕೋಟಿ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ಆದರೆ ಅಬಕಾರಿ ಸುಂಕ ದೇಶದಲ್ಲಿಯೇ ಅತಿ ಹೆಚ್ಚು ವಿಧಿಸುತ್ತಿರುವುದರಿಂದ ಆದಾಯ ಕಡಿಮೆಯಾಗಲು ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು, ಕರ್ನಾಟಕದಲ್ಲಿ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಲಾಗುತ್ತಿದೆ. ಇದಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಮಹಾರಾಷ್ಟ್ರ, ತೆಲಂಗಾಣ, ಕೇರಳ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ದುಬಾರಿ ಮದ್ಯದ ಬೆಲೆಗಳು ಮತ್ತು ಅಬಕಾರಿ ಸುಂಕದ ಸ್ಲ್ಯಾಬ್‌ಗಳನ್ನು ಅಧ್ಯಯನ ಮಾಡಲಿವೆ. ”ಜೂನ್ ಮೊದಲ ವಾರದಲ್ಲಿ ವಿಧಾನಪರಿಷತ್ ಸದಸ್ಯರ ಚುನಾವಣೆ ನಂತರ ಅಧ್ಯಯನ ಮಾಡುತ್ತೇವೆ ಎಂದಿದ್ದಾರೆ.

Leave A Reply

Your email address will not be published.