ಸದ್ದಿಲ್ಲದೆ ನಡೆದೇ ಹೋಯಿತು ಕುತುಬ್ ಮಿನಾರ್ ಆವರಣ ಸಮೀಕ್ಷೆ | ಹಿಂದೂ ಹಾಗೂ ಜೈನ ದೇವರುಗಳ ಅನೇಕ ವಿಗ್ರಹಗಳು ಪತ್ತೆ !!
ವಾರಣಾಸಿಯ ಜ್ಞಾನವಾಪಿ ಸರ್ವೇ ವಿವಾದ ಇನ್ನೂ ಕೂಡ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ ಇದರ ನಡುವೆ ಮತ್ತೊಂದು ವಿವಾದ ತೆರೆ ಮೇಲೆ ಬಂದಿದೆ. ಹೌದು. ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಕುತುಬ್ ಮಿನಾರ್ ಬಳಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಸದ್ದಿಲ್ಲದೇ ಸಮೀಕ್ಷೆ ಮಾಡಿ ಕೈತೊಳೆದುಕೊಂಡಿದೆ.
ಈ ಕುರಿತು ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ, ಇಲ್ಲ ಇದೆಲ್ಲಾ ಸುಳ್ಳು ಎಂದು ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದರು. ಯಾವುದೇ ಸರ್ವೇಗೆ ಆದೇಶ ನೀಡಿಲ್ಲ ಎಂದು ಕೂಡ ಹೇಳಿದ್ದರು. ಆದರೆ ಕವ್ವಾತುಲ್ ಇಸ್ಲಾಂ ಮಸೀದಿ ಆವರಣದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ತರುಣ್ ವಿಜಯ್ ನೇತೃತ್ವದ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಪ್ರಾಧಿಕಾರ(ಎನ್ಎಂಎ) ಸಮೀಕ್ಷೆ ಜೊತೆಗೆ ಪ್ರತಿಮಾಶಾಸ್ತ್ರ(ಐಕಾನೋಗ್ರಫಿ)ವನ್ನು ಕೈಗೊಂಡಿದೆ.
ಈ ವೇಳೆ 27 ಹಿಂದೂ ಮತ್ತು ಜೈನ ಮಂದಿರಗಳ ಅವಶೇಷಗಳನ್ನು ಬಳಸಿ ಇಲ್ಲಿ ದೊಡ್ಡಮಟ್ಟದ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿರೋದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಎನ್ಎಂಎ ಈಗಾಗಲೇ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ.
ಎನ್ಎಂಎ ವರದಿಯಲ್ಲೇನಿದೆ??
ಶೇಷಶಯನ ವಿಷ್ಣು, ತೀರ್ಥಂಕರ ಪಾರ್ಶ್ವನಾಥ, ಮೇಲ್ಭಾಗದಲ್ಲಿ ತೀರ್ಥಂಕರರ ಚಿತ್ರ, ಕರುವಿಗೆ ಹಾಲುಣಿಸುತ್ತಿರುವ ಹಸು, ದೇಗುಲ ಮಾದರಿಯ ದ್ವಾರ, ಯಮುನಾ ದೇವಿ ವಿಗ್ರಹ, ನವಿಲಿನೊಂದಿಗೆ ಕಾರ್ತಿಕೇಯ, ನವಗ್ರಹ, ಸೂರ್ಯ, ಯಮುನಾದೇವಿ, ನಂದಿಯ ಮೇಲೆ ಶಿವ , ಪ್ರಹ್ಲಾದನ ಜೊತೆ ನರಸಿಂಹ, ಬಾಲ ಕೃಷ್ಣ, ವಸುದೇವ, ದೇವಕಿ, ಗಣೇಶನ ವಿಗ್ರಹ ಸಿಕ್ಕಿವೆ.
ತರುಣ್ ವಿಜಯ್ ಹೇಳೋದೇನು?
1052ರಲ್ಲಿ ದೆಹಲಿ ಸ್ಥಾಪಿಸಿದ ಮಹಾರಾಜ ಅನಂಗ್ಪಾಲ್ನಿಂದ ವಿಷ್ಣುಗರುಡ ಧ್ವಜ ಸ್ಥಾಪನೆ. ಆ ವಿಷ್ಣು ಗರುಡ ಧ್ವಜವೇ ಈಗಿನ ಕುತುಬ್ ಮಿನಾರ್. ವಿಷ್ಣು ಸ್ಥಂಭದ ಬಳಿಯೇ 27 ದೇವಸ್ಥಾನಗಳನ್ನು ಅನಂಗ್ಪಾಲ್ ನಿರ್ಮಿಸಿದ್ದ. ಕಾಲನಂತರದಲ್ಲಿ ಕುತುಬುದ್ದೀನ್ ಐಬಕ್ ದೆಹಲಿ ಅತಿಕ್ರಮಿಸಿ ವಿಷ್ಣುಸ್ಥಂಭದ ಬಳಿಯ 27 ದೇಗುಲ ನಾಶಗೊಳಿಸಿದ. ದೆಹಲಿ ಸ್ಮಶಾನ ನಗರಿಯಲ್ಲ. ಇದು ಕಲೆ, ಸಂಸ್ಕೃತಿ, ತ್ಯಾಗದ ನಗರಿ ಎಂದು ತರುಣ್ ವಿಜಯ್ ಹೇಳಿದ್ದಾರೆ.