4 ಮಕ್ಕಳ ಹೆತ್ತಳಾ ಮಹಾತಾಯಿ | 2 ಹೆಣ್ಣು, 2 ಗಂಡು- ಅಮ್ಮ ಮಗು ಆರೋಗ್ಯ – ಡಾಕ್ಟರ್ ಹೇಳಿಕೆ

ಶಿವಮೊಗ್ಗದಲ್ಲಿ ಮಹಿಳೆಯೋರ್ವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. ಸರ್ಜಿ ಆಸ್ಪತ್ರೆಯಲ್ಲಿ ನಿನ್ನೆ ಬೆಳಗ್ಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ನಾಲ್ಕು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಭದ್ರಾವತಿ ತಾಲೂಕು ತಡಸಾ ಗ್ರಾಮದ ಆರೀಫ್ ಅವರ ಪತ್ನಿ ಅಲ್ಮಾಜ್ ಬಾನು (22) ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳ ಪೈಕಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿವೆ.

ನಾಲ್ವರು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ
ಎಂದು ಸರ್ಜಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನಾಲ್ವರು ಮಕ್ಕಳ ಪೈಕಿ ಒಂದೊಂದು ಮಗು 1.1 ಕೆ.ಜಿ, 1.2 ಕೆ.ಜಿ, 1.3 ಕೆಜಿ, 18 ಕೆ.ಜಿ ಇದ್ದಾವೆ. ಆದರೆ, ನಾಲ್ಕು ಮಕ್ಕಳಿಗೂ ಸ್ವಲ್ಪ ಪ್ರಮಾಣದ ಉಸಿರಾಟದ ಸಮಸ್ಯೆ ಇದೆ. ಹಾಗಾಗಿ 2 ಮಕ್ಕಳಿಗೆ ಸಿ ಪ್ಯಾಪ್ ಅಳವಡಿಸಲಾಗಿದೆ.ಇನ್ನು ಎರಡು ಮಕ್ಕಳಿಗೆ ಕೃತಕ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎಲ್ಲಾ ಮಕ್ಕಳಿಗೂ ತಾಯಿ ಎದೆ ಹಾಲು ಕುಡಿಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ಕಾಂಗರೂ ಮದರ್ ಕೇರ್ ಮಾಡಲು ಕೂಡ ಆಸ್ಪತ್ರೆ ವ್ಯವಸ್ಥೆ ಮಾಡಿಕೊಂಡಿದೆ.
ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವ ಸಾಧ್ಯತೆ

ಇಂತಹ ಹೆರಿಗೆ ಮಾಡಿಸುವುದು ವೈದ್ಯರಿಗೆ ಅತ್ಯಂತ ಸವಾಲಿನ ಕೆಲಸ. ಈ ಪ್ರಕರಣಗಳಲ್ಲಿ ಅಧಿಕ ರಕ್ತಸ್ರಾವ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅರವಳಿಕೆ ತಜ್ಞರನ್ನು ಇರಿಸಿಕೊಂಡು ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ ಎಂದು ಸರ್ಜಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

‘ಐದು ಲಕ್ಷ ಜನರಲ್ಲಿ ಒಬ್ಬರು ಮಾತ್ರ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ. ತಾಯಿಗೆ 32 ವಾರ 5 ದಿನಗಳಾಗಿದ್ದು, ಇದು ಅವಧಿ ಪೂರ್ವ ಹೆರಿಗೆ, ತಾಯಿಗೆ ಅರವಳಿಕೆ ಕೊಡುಬೇಕಿರುವುದು ಮತ್ತು ಅಧಿಕ ರಕ್ತಸ್ರಾವ ಉಂಟಾಗುವ ಸಂಭವವಿರುತ್ತದೆ. ಇವುಗಳ ನಮಗೆ ತುಂಬಾ ಸವಾಲಾಗಿದ್ದವು. ಎಲ್ಲ ಮಕ್ಕಳಿಗೆ ಹಾಲು ಶುರು ಮಾಡಲಾಗಿದೆ. ಅವಧಿ ಪೂರ್ವವಾಗಿದ್ದರೂ ಮಕ್ಕಳ ತೂಕ ಈ ಹಂತದಲ್ಲಿ ಸರಿಯಾಗಿದೆ. ತಾಯಿಯ ಆರೋಗ್ಯವು ಚನ್ನಾಗಿದೆ’ ಎಂದು ಸರ್ಜಿ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ. ಚೇತನಾ ತಿಳಿಸಿದ್ದಾರೆ.

ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ನಾಲ್ಕು ಮಕ್ಕಳಿಗೆ ತಾಯಿಯ ಹಾಲು ಕೊಡುವುದು, ಅವುಗಳ ಆರೈಕೆ ಮಾಡುವುದು ಸುಲಭವಲ್ಲ. ತಾಯಿ ಮತ್ತು ಮಕ್ಕಳನ್ನು ಕುಟುಂಬದವರು ಸೂಕ್ಷ್ಮವಾಗಿ ಆರೈಕೆ ಮಾಡಬೇಕಾಗುತ್ತದೆ ಎಂದು ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ. ಚೇತನಾ ತಿಳಿಸಿದ್ದಾರೆ.

Leave A Reply

Your email address will not be published.