ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ !! | ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 7 ಮಂದಿ ಸ್ಥಳದಲ್ಲೇ ಸಾವು, 26 ಜನರಿಗೆ ಗಂಭೀರ ಗಾಯ

ಮಧ್ಯರಾತ್ರಿ ಹುಬ್ಬಳ್ಳಿ ಹೊರವಲಯದ ತಾರಿಹಾಳದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಲಾರಿ ಚಾಲಕ, ಕ್ಲೀನರ್ ಸೇರಿದಂತೆ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 26 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ.

 

ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಅಕ್ಕಿಚೀಲಗಳೊಂದಿಗೆ ಧಾರವಾಡ ಕಡೆ ಹೊರಟಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋದ ಲಾರಿ ಡ್ರೈವರ್ ಈ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಮೃತರೆಲ್ಲರೂ ಮಹಾರಾಷ್ಟ್ರದ ಕೊಲ್ಹಾಪುರದವರಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಸದ್ಯ ಗಾಯಾಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಧಾರವಾಡ ಸಮೀಪ ಮೊನ್ನೆಯಷ್ಟೇ ಭೀಕರ ರಸ್ತೆ ಅಪಘಾತ ಸಂಭವಿಸಿ ಒಂಬತ್ತು ಜನ ಸಾವನ್ನಪ್ಪಿದ್ದರು. ಕ್ರೂಷರ್ ಅಪಘಾತದಲ್ಲಿ ಒಂಬತ್ತು ಜನ ಸಾವಿಗೀಡಾಗಿ, ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಮದುವೆಯ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನ ಹಿಂದೆಯೇ ಹುಬ್ಬಳ್ಳಿ ಬಳಿ ಅಪಘಾತ ಸಂಭವಿಸಿ ಏಳು ಜನ ಸಾವಿಗೀಡಾಗಿದ್ದಾರೆ.

Leave A Reply

Your email address will not be published.