ಉಚಿತವಾಗಿ ಕಣ್ಣಿನ ಆಪರೇಶನ್ ಕೊಡಿಸುವುದಾಗಿ ಹೇಳಿ ವೃದ್ಧ ದಂಪತಿಗಳಿಂದ ಚಿನ್ನಾಭರಣ ದೋಚಿದ ಖತರ್ನಾಕ್ ಕಳ್ಳ
ತುಮಕೂರು : ಇಂತಹ ಕಾಲದಲ್ಲಿ ಯಾವುದೇ ವಿಷಯದಲ್ಲೂ ಯಾರನ್ನು ನಂಬಲು ಅಸಾಧ್ಯ ಎಂಬಂತಾಗಿದೆ. ಯಾಕಂದ್ರೆ ಅಷ್ಟು ಕಿರಾತಕರ ಆಟ ನಡೆಯುತ್ತಲೇ ಇದೆ. ವೃದ್ಧರು, ಅನಾಥರು, ಒಂಟಿ ಮಹಿಳೆಯರೇ ಇವರ ಟಾರ್ಗೆಟ್ ಆಗಿದ್ದಾರೆ. ಇಂತಹುದೇ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದ್ದು, ವೃದ್ಧ ದಂಪತಿಗೆ ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಚಿನ್ನಾಭರಣ ದೋಚಿರುವ ಘಟನೆ ವರದಿಯಾಗಿದೆ.
ಚಿನ್ನಾಭರಣ ಕಳೆದುಕೊಂಡ ವೃದ್ಧ ದಂಪತಿಗಳನ್ನು ಪಟ್ಣಣದ ದೊಡ್ಡಪೇಟೆ ನಿವಾಸಿಗಳಾದ ಗಿರಿಜಮ್ಮ, ರೇಣುಕಪ್ಪ ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗ್ಗೆ ಸರಿ ಸುಮಾರು 9 ಗಂಟೆ ವೇಳೆಯಲ್ಲಿ ಗಿರಿಜಮ್ಮ ನಿವಾಸಿದ ಬಳಿ ಬಂದ ಅಪರಿಚಿತ ಖದೀಮನೊಬ್ಬ, ನಿಮಗೆ ಕಣ್ಣು ಕಾಣಿಸದಿದ್ದರೆ ನಾವು ಉಚಿತವಾಗಿ ಕಣ್ಣಿನ ಆಪರೇಶನ್ ಮಾಡಿಸಿಕೊಡ್ತಿನಿ ಅಂತ ನಂಬಿಸಿದ್ದಾನೆ. ಅಲ್ಲದೇ ನಿಮ್ಮ ಆಧಾರ ಕಾರ್ಡ್ ಹಾಗೂ ರೇಷನ್ ಕಾರ್ಡ್ ಇದ್ರೆ ಉಚಿತವಾಗಿ ಆಪರೇಷನ್ ಮಾಡ್ತಾರೆ. ಜೊತೆಗೆ ಕಣ್ಣು ಆಪರೇಷನ್ ಮಾಡಿಸಿದವರಿಗೆ ಅಂಚೆ ಕಚೇರಿಯಲ್ಲಿ 10 ಸಾವಿರ ಹಣವನ್ನು ಕೂಡ ನೀಡದ್ದಾರೆ ಅಂತ ನಂಬಿಸಿ ಆ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನ ಪಡೆದಿದ್ದಾನೆ. ಬಳಿಕ ಆ ವೃದ್ಧ ದಂಪತಿಗಳನ್ನ ತನ್ನದೇ ಬೈಕ್ ನಲ್ಲಿ ಕೊರಟಗೆರೆ ಸರ್ಕಾರಿ ಆಸ್ಪತ್ರೆ ಬಳಿ ಕರೆದೊಯ್ದಿದ್ದಾನೆ.
ಆಸ್ಪತ್ರೆ ಬಳಿ ಹೋಗುತ್ತಿದ್ದಂತೆ ನಿಮ್ಮ ಬಳಿ ಇರೋ ಚಿನ್ನಾಭರಣವನ್ನ ನನ್ನ ಬಳಿ ಕೊಡಿ, ಆಪರೇಷನ್ ಮಾಡುವಾಗ ಆಸ್ಪತ್ರೆಯವರು ಕದ್ದು ಬಿಡ್ತಾರೆ ಅಂತ ಪುಂಗಿ ಬಿಟ್ಟಿದ್ದಾನೆ. ಆ ಖದೀಮನ ಮಾತು ನಂಬಿದ ವೃದ್ದೆ, ತನ್ನ ಬಳಿ ಇದ್ದ 60 ಗ್ರಾಂ ಮಾಂಗಲ್ಯದ ಸರ, 10 ಗ್ರಾಂ ತೂಕದ ಚೈನ್, 10 ಗ್ರಾಂ ತೂಕದ ಚಿನ್ನದುಂಗರವನ್ನು ಖದೀಮನ ಕೈಗೆ ನೀಡಿದ್ದಾರೆ. ಕೈಗೆ 80 ಗ್ರಾಂ ಚಿನ್ನಾಭರಣ ಸೇರುತ್ತಿದ್ದಂತೆ ಆಸ್ಪತ್ರೆ ಒಳಗೆ ಹೋಗಿ ಬರುವುದಾಗಿ ತಿಳಿಸಿ ಕಣ್ಮರೆಯಾಗಿದ್ದಾನೆ.
ಖದೀಮ ಎಷ್ಟು ಹೊತ್ತಾದರೂ ಆಸ್ಪತ್ರೆ ಹೊರಗೆ ಬರದಿದ್ದಾಗ, ಅನುಮಾನಗೊಂಡ ವೃದ್ದೆ, ವೈದ್ಯರ ಬಳಿ ಕಣ್ಣಿನ ಆಪರೇಷನ್ ಮಾಡುವ ಬಗ್ಗೆ ವಿಚಾರಿಸಿದಾಗ ಇಲ್ಲಿ ಉಚಿತವಾಗಿ ಯಾವುದೇ ತರದ ಕಣ್ಣಿನ ಆಪರೇಷನ್ ನಡೆಯುತ್ತಿಲ್ಲ ಅನ್ನೊದು ಗೊತ್ತಾಗಿದೆ. ಆಗ ಅಪರಚಿತ ಖದೀಮ ಚಿನ್ನಾಭರಣ ಎಗರಿಸಲು ಮಾಡಿದ ಮಾಸ್ಟರ್ ಪ್ಲಾನ್ ಬೆಳಕಿಗೆ ಬಂದಿದೆ.
ಈ ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಗೆ ಮೋಸ ಹೋದ ವೃದ್ಧ ದಂಪತಿ ದೂರು ನೀಡಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೊರಟಗೆರೆ ಪೊಲೀಸರು ಖತರ್ನಾಕ್ ಖದೀಮನಿಗೆ ಹುಡುಕಾಟ ನಡೆಸುತ್ತಿದ್ದಾರೆ.