ಪಡಿತರ ಚೀಟಿದಾರರೇ ಇತ್ತ ಗಮನಿಸಿ : ಇ-ಕೆವೈಸಿ ಮಾಡದಿದ್ದರೆ ರೇಷನ್ ಸ್ಥಗಿತ

0 11

ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಇ ಕೆವೈಸಿ(ಜೀವ ಮಾಪಕ ಮರು ಧೃಡೀಕರಣ) ಸಂಗ್ರಹಿಸಲಾಗುತ್ತಿದ್ದು, ಇದುವರೆಗೆ ನಾನಾ ಕಾರಣಗಳಿಂದ ಇ ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು ಎಂದು ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಹೇಳಿದ್ದಾರೆ.

ಪಡಿತರ ಚೀಟಿದಾರರ ಬಗ್ಗೆ ಕೈಬಿಟ್ಟು ಹೋಗಿದ್ದ ಮಾಹಿತಿಗಳನ್ನು ಉನ್ನತೀಕರಣ ಮಾಡಲು ಸರ್ಕಾರವು ಇ-ಕೆವೈಸಿ (ಜೀವ ಮಾಪಕ ಮತ್ತು ದೃಢೀಕರಣ) ಕಾರ್ಯಕ್ರಮಕ್ಕೆ ಸರ್ಕಾರವು ಅವಕಾಶ ಕಲ್ಪಿಸಿಕೊಟ್ಟಿದೆ. ಸರ್ಕಾರದ ಆದೇಶದಂತೆ ಇ-ಕೆವೈಸಿ (ಜೀವ ಮಾಪಕ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಪುನರಾರಂಭಿಸಲಾಗಿದ್ದು, ಅಂತ್ಯೋದಯ (ಎ.ಎ.ವೈ.), ಆದ್ಯತಾ (ಪಿ.ಹೆಚ್.ಹೆಚ್)ಹಾಗೂ ಆದ್ಯತೇತರಾ (ಎನ್.ಪಿ.ಹೆಚ್.ಹೆಚ್) ಪಡಿತರ ಚೀಟಿಗಳಲ್ಲಿ ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಥವಾ ಬೆರಳಚ್ಚು ನೀಡಿದ ಸದಸ್ಯರುಗಳು ಅಂದರೆ ಉದ್ಯೋಗದ ವಿದ್ಯಾಭ್ಯಾಸದ ಸಲುವಾಗಿ ಹಾಗೂ ಜೀವನೋಪಾಯ ಸಂಬಂಧ ಇತರೆ ಕಾರಣಗಳಿಂದಾಗಿ ಹೊರಗಿನ ಪ್ರದೇಶದಲ್ಲಿ ನೆಲೆಸಿರುವ ಪಡಿತರ ಚೀಟಿ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸುವಂತೆ ಡಿಸಿ ಅನಿರುದ್ಧ ಶ್ರವಣ್ ಅವರು ತಿಳಿಸಿದ್ದಾರೆ.

ಇ-ಕೆವೈಸಿ ಮಾಡಿಸಲು ತಪ್ಪಿದ್ದಲ್ಲಿ, ಪಡಿತರ ಚೀಟಿಯನ್ನು ಸ್ಥಗಿತಗೊಳಿಸಲಾಗುವುದೆಂದು, ಹಾಗೂ ಪ್ರಸ್ತುತ ಇ-ಕೆವೈಸಿ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ. ಪಡಿತರ ಚೀಟಿದಾರರು ಯಾವುದೇ ಹಣ ನೀಡುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave A Reply