ಬುರ್ಖಾಧಾರಿಗಳಿಂದ ಹೊಸ ವೈನ್ ಶಾಪ್ ಮೇಲೆ ಗ್ರೆನೇಡ್ ದಾಳಿ !! | ಓರ್ವ ನೌಕರ ಮೃತ್ಯು, ಮೂವರಿಗೆ ಗಂಭೀರ ಗಾಯ

ಹೊಸದಾಗಿ ಸ್ಥಾಪಿಸಲಾದ ವೈನ್ ಶಾಪ್ ಮೇಲೆ ಬುರ್ಖಾ ಧರಿಸಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ನೌಕರರು ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ಬಾರಾಮುಲ್ಲಾದ ದಿವಾನ್ ಬಾಗ್‌ನಲ್ಲಿ ಹೊಸ ಮದ್ಯದ ಅಂಗಡಿ ತೆರೆಯಲಾಗಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಉಗ್ರರು ಈ ಅಂಗಡಿಯ ಹೊರಗೆ ಬಂದು ನಿಂತಿದ್ದರು. ಬುರ್ಖಾ ಧರಿಸಿದ್ದ ಭಯೋತ್ಪಾದಕನೊಬ್ಬ ಮದ್ಯದಂಗಡಿಯನ್ನು ತಲುಪಿ ಕಿಟಕಿಯೊಳಗೆ ಕೈ ಹಾಕಿ ಹ್ಯಾಂಡ್ ಗ್ರೆನೇಡ್ ಎಸೆದ. ಇದಾದ ಬಳಿಕ ಇಬ್ಬರು ಉಗ್ರರು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭಯೋತ್ಪಾದಕರ ಗ್ರೆನೇಡ್ ದಾಳಿಯಲ್ಲಿ, ಅಂಗಡಿಯಲ್ಲಿದ್ದ 4 ಉದ್ಯೋಗಿಗಳು ಹ್ಯಾಂಡ್ ಗ್ರೆನೇಡ್ ಚೂರುಗಳಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬಕ್ರ ರಾಜೌರಿ ನಿವಾಸಿ ಕಿಶನ್ ಲಾಲ್ ಪುತ್ರ ರಂಜಿತ್ ಸಿಂಗ್ (52) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮತ್ತೊಂದೆಡೆ, ಗೋವರ್ಧನ್ ಸಿಂಗ್ ಎಂಬುವವರ ಪುತ್ರ ಬಿಜೇಂದ್ರ ಸಿಂಗ್, ರವಿಕುಮಾರ್ ಎಂಬುವವರ ಪುತ್ರ ಕರ್ತಾರ್ ಸಿಂಗ್, ಗೋವಿಂದ್ ಸಿಂಗ್ ಪುತ್ರ ಗುರುದೇವ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಿಂದ್ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಮೂಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆ ನಡೆದ ತಕ್ಷಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರಾದರೂ ಅವರ ಸುಳಿವು ಪತ್ತೆಯಾಗಿಲ್ಲ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬಾರಾಮುಲ್ಲಾ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾರಾಮುಲ್ಲಾದ ದಿವಾನ್ ಬಾಗ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಂಜಿತ್ ಸಿಂಗ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ.

Leave A Reply

Your email address will not be published.