ಆರು ವರ್ಷ ಮೇಲ್ಪಟ್ಟಿದ್ದರೆ ಮಾತ್ರವಲ್ಲ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಈಗ ಮೂರು ವರ್ಷದ ಪುಟಾಣಿಗೂ ಅರ್ಧ ಟಿಕೆಟ್ ನೀಡಲಾಗುತ್ತಿದೆ. ಉದ್ದ ಬೆಳೆದ ಮಕ್ಕಳಿಗೆ ದೊಡ್ಡ ಟಿಕೇಟು ಹರಿಯಲಾಗುತ್ತಿದೆ. ತಮಾಷೆಯಲ್ಲ, ಇದು ಸತ್ಯ ಸಾರ್.
ಈ ಹಿಂದೆ ಬಸ್‌ಗಳಲ್ಲಿ ಆರು ವರ್ಷದೊಳಗಿನ ಮಕ್ಕಳು ಪ್ರಯಾಣ ಮಾಡಿದರೆ ಉಚಿತ ಪ್ರಯಾಣದ ವ್ಯವಸ್ಥೆಯಿತ್ತು. 6-12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅರ್ಧ ಟಿಕಟ್ ನೀಡಬೇಕಿತ್ತು. ಈಗ ವಯಸ್ಸನ್ನು ಆಧರಿಸಿ ಟಿಕೆಟ್ ಪಡೆಯುತ್ತಿಲ್ಲ. ಬದಲಿಗೆ ಮಗುವಿನ ಎತ್ತರ ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಮಗು ಮೂರು ಅಡಿ ಎತ್ತರವಿದ್ದು, ವಯಸ್ಸು ಇನ್ನೂ ಎರಡು ಅಥವಾ ಮೂರು ವರ್ಷವೇ ಆಗಿರಲಿ, ಅಂತಹ ಪೋಷಕ ಪ್ರಯಾಣಿಕರಿಂದ ಅರ್ಧ ಟಿಕೆಟ್‌ನ ಹಣ ಪಡೆದು ಟಿಕೆಟ್ ಕೊಡಲಾಗುತ್ತಿದೆ. ಇಂಥದೊಂದು ವ್ಯವಸ್ಥೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಜಾರಿಗೆ ತಂದಿದೆ.
ಮಕ್ಕಳ ಎತ್ತರ ನೋಡಲು ಬಸ್‌ನ ಮಧ್ಯದಲ್ಲಿರುವ ಸರಳುಗಳ ಮೇಲೆ ಎರಡು ಕಡೆ (3 ಅಡಿ, 4 ಅಡಿ) ಬಣ್ಣದಲ್ಲಿ ಗುರುತು ಮಾಡಲಾಗಿದೆ. ಯಾರು ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಮಕ್ಕಳನ್ನು ಸರಳಿಗೆ ನಿಲ್ಲಿಸಿ, ಎತ್ತರ ನೋಡಿ ಟಿಕೆಟ್ ನೀಡಲಾಗುತ್ತದೆ.
ಇದು ಸಾಕಷ್ಟು ಬಡ ಪ್ರಯಾಣಿಕರಿಗೆ ಆರ್ಥಿಕವಾಗಿ ಹೊರೆ. ಇನ್ನು ಕೆಲವರಿಗೆ, ತಮ್ಮ ಮಕ್ಕಳಿಗೆ ವಯಸ್ಸು ಚಿಕ್ಕದಿದ್ದರೂ ಅವರ ಬೆಳವಣಿಗೆ ಹೆಚ್ಚಾಗಿರುತ್ತದೆ. ಇಂತಹ ಪೋಷಕ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಇರುಸುಮುರುಸು ಆಗುತ್ತಿದೆ. ಕೆಲ ಮಕ್ಕಳು ಮೂರು ವರ್ಷಕ್ಕೆ ಮೂರು ಅಡಿಯಷ್ಟು ಎತ್ತರ ಬೆಳೆದಿರುತ್ತಾರೆ. ಆಕಾರದಲ್ಲೂ ದಪ್ಪ ಇರುತ್ತಾರೆ. ಮಗುವಿನ ನೈಜ ವಯಸ್ಸನ್ನು ಹೇಳಿದರೂ ನಿರ್ವಾಹಕರು ನಂಬುವುದಿಲ್ಲ.