ಅಡುಗೆಯಲ್ಲಿ ಉಪ್ಪು, ಖಾರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪತ್ನಿಯ ತಲೆ ಬೋಳಿಸಿದ ಗಂಡ !!

0 9

ಪತ್ನಿ ಅಡುಗೆ ರುಚಿಕರವಾಗಿ ಮಾಡದಿದ್ದರೆ ಗಂಡ ಒಂದೆರಡು ಮಾತು ಹೇಳುವುದು ಸಹಜ. ಆದರೆ ಇಷ್ಟಕ್ಕೇ ಹೆಂಡತಿಗೆ ಭಯಾನಕ ಶಿಕ್ಷೆ ನೀಡುವುದು ಎಷ್ಟು ಸರಿ. ಆದರೆ ಇಲ್ಲೊಬ್ಬ ವ್ಯಕ್ತಿ ಕರಿಯಲ್ಲಿ ಉಪ್ಪು, ಖಾರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಪತ್ನಿಯ ತಲೆಯನ್ನೇ ಬೋಳಿಸಿದ ವಿಚಿತ್ರ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಉಪ್ಪು ಹೆಚ್ಚಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬ ತನ್ನ 28 ವರ್ಷದ ಪತ್ನಿಯ ತಲೆ ಬೋಳಿಸಿ, ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆ ಕೋಪಗೊಂಡ ಪತ್ನಿ, ಪತಿ ವಿರುದ್ಧ ವತ್ವಾ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

ಪತ್ನಿ ರಿಜ್ವಾನಾ ಪತಿ ವಿರುದ್ಧ ದೂರು ಕೊಟ್ಟಿದ್ದು, 8 ವರ್ಷಗಳ ಹಿಂದೆ ನಾನು ಮತ್ತು ನನ್ನ ಪತಿ ಇಮ್ರಾನ್ ಮದುವೆಯಾಗಿದ್ದೇವೆ. ಅವನು ಕೂಲಿ ಕೆಲಸ ಮಾಡುತ್ತಿದ್ದಾನೆ. ಮಧ್ಯಾಹ್ನ ವೇಳೆ ಇಮ್ರಾನ್ ಊಟಕ್ಕೆ ಮನೆಗೆ ಬಂದಿದ್ದ. ನಾನು ಅವನಿಗೆ ಚಪಾತಿ ಮತ್ತು ಕರಿ ಕೊಟ್ಟೆ. ಅವನು ಊಟವನ್ನು ಇಷ್ಟಪಡಲಿಲ್ಲ. ಆಹಾರಕ್ಕೆ ಹೆಚ್ಚು ಉಪ್ಪು, ಖಾರ ಸೇರಿಸಿದ್ದಕ್ಕಾಗಿ ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ಬೇರೆ ಏನಾದ್ರೂ ಮಾಡ್ತೀನಿ ಅಂತ ಹೇಳಿದರೂ ಆತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಇದ್ದ.

ನಂತರ ಈ ಕ್ಷುಲ್ಲಕ ಕಾರಣಕ್ಕೆ ಒಂದು ಕೋಲು ತೆಗೆದುಕೊಂಡು ನನಗೆ ಹೊಡೆಯಲು ಪ್ರಾರಂಭಿಸಿದನು. ಆದರೆ ನಾನು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದೆ. ಅವನು ಸುತ್ತಲೂ ನೋಡಿ ರೇಜರ್ ತೆಗೆದುಕೊಂಡ. ಇದು ಏಕೆ ಎಂದು ನಾನು ಅರ್ಥಮಾಡಿಕೊಳ್ಳುವ ಮೊದಲೇ ಅವನು ನನ್ನನ್ನು ಬಲವಂತವಾಗಿ ಹಿಡಿದುಕೊಂಡು ನನ್ನ ಕೂದಲನ್ನು ಬೋಳಿಸಲು ಪ್ರಾರಂಭಿಸಿದನು.

ನನ್ನ ಸಂಪೂರ್ಣ ತಲೆ ಬೋಳಿಸಿದ ನಂತರವೇ ಇಮ್ರಾನ್ ನನ್ನನ್ನು ಬಿಟ್ಟ ಎಂದು ನೊಂದುಕೊಂಡು ಹೇಳಿದ್ದಾಳೆ. ನಾನು ಕಿರುಚಾಡಿದ್ದಾರಿಂದ ನೆರೆಹೊರೆಯವರು ಓಡಿ ಬಂದರು. ಅವರೇ ನನ್ನನ್ನು ಬಿಡಿಸಿ ಪೊಲೀಸರ ಬಳಿಗೆ ಹೋಗುವಂತೆ ಸೂಚಿಸಿದರು. ಆದರೆ ನಾನು ಆ ಸಮಯದಲ್ಲಿ ತುಂಬಾ ಭಯಗೊಂಡಿದ್ದೆ, ಆಘಾತಕ್ಕೊಳಗಾಗಿದ್ದೆ. ಪರಿಣಾಮ ಘಟನೆ ನಡೆದ ಮೂರು ದಿನಗಳ ಬಳಿಕ ದೂರು ಕೊಡುತ್ತಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

ಪ್ರಸ್ತುತ ಪೊಲೀಸರು ಇಮ್ರಾನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Leave A Reply