ಹುಟ್ಟಿದಾಗಿನಿಂದ ಒಂದು ಬಾರಿಯೂ ಕುಳಿತಿಲ್ಲ ಈ 32 ವರ್ಷದ ಯುವತಿ!
ದಿನಕ್ಕೆ ನಾವೆಷ್ಟು ಬಾರಿ ನಿಂತ್ಕೋತೇವೆ, ಎಷ್ಟು ಬಾರಿ ಮಲಗುತ್ತೇವೆ, ಇದರ ಬಗ್ಗೆ ನಾವು ಲೆಕ್ಕ ಇಟ್ಟುಕೊಳ್ಳೋದಿಲ್ಲ. ಕೆಲವರು ದಿನದಲ್ಲಿ ಹೆಚ್ಚೆಂದರೆ 8-10 ಗಂಟೆ ಕುಳಿತುಕೊಂಡು ಕೆಲಸ ಮಾಡುವವರಿದ್ದಾರೆ. ಇನ್ನು ಕೆಲವರು ತಿರುಗಾಡಿಕೊಂಡು ಕೆಲಸ ಮಾಡುವವರಿದ್ದಾರೆ. ಹಾಗಾಗಿ ಇಂಥವರು ಕುಳಿತುಕೊಳ್ಳುವುದು ಕಡಿಮೆ.
ಆದರೆ ನಾವು ನಿಮಗೆ ಹೇಳುವ ಸುದ್ದಿ ಕೇಳಿದರೆ ನಂಬುವುದಕ್ಕೂ ಕಷ್ಟ ಆಗಬಹುದು. ಆದರೂ ನೀವು ನಂಬಲೇಬೇಕು. ಇಲ್ಲೊಬ್ಬಳು ಹುಡುಗಿ ಕಳೆದ 30 ವರ್ಷಗಳಿಂದ ಒಂದು ಬಾರಿಯೂ ಕುಳಿತುಕೊಂಡಿಲ್ಲ ಅಂದರೆ ನಂಬುತ್ತೀರಾ? ಆಕೆ ನಿಲ್ಲುತ್ತಾಳೆ ಹಾಗೆ ಮಲಗಿಕೊಳ್ಳುತ್ತಾಳೆ. ಆದ್ರೆ ಕುಳಿತುಕೊಳ್ಳಲು ಆಕೆಗೆ ಬರ್ತಿಲ್ಲ.
ಆಕೆಗೆ ತಾನು ಯಾವಾಗ ಕುಳಿತುಕೊಂಡಿದ್ದೇನೆ ಎಂಬುದೇ ನೆನಪಿಲ್ಲವಂತೆ. ಕುಳಿತುಕೊಳ್ಳಲು ಪ್ರಯತ್ನ ಪಟ್ಟರೂ ಆಕೆಯಿಂದ ಸಾಧ್ಯವಾಗಿಲ್ಲ. ಅಸಹನೀಯ ನೋವು ಆಕೆಯನ್ನು ಕಾಡ್ತಿದೆಯಂತೆ. ಇದೇ ವಿಚಿತ್ರವೆಂದು ಅನಿಸಿರಬಹುದು ನಿಮಗೆ. ಆದ್ರೆ ಇದಕ್ಕೆ ಕಾರಣವೇನು? ಇಲ್ಲಿದೆ ಉತ್ತರ.
ಕಳೆದ 30 ವರ್ಷಗಳಿಂದ ನೆಲದಲ್ಲಿ ಕುಳಿತುಕೊಳ್ಳದ ಹುಡುಗಿ ಹೆಸರು ಜೋನ್ನಾ ಕ್ಲಿಚ್. ಈಕೆ ಪೋಲೆಂಡ್ ನಿವಾಸಿ. ಈಕೆ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಇದೇ ಕಾರಣಕ್ಕೆ ಆಕೆಗೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಮೂಳೆಗಳ ಸ್ನಾಯು ಕ್ಷೀಣತೆ ಸಮಸ್ಯೆಯಿಂದ ಬಳಲುತ್ತಿದ್ದಾಳೆ. 3 ಜೀನ್‌ಗಳ ರೂಪಾಂತರಗಳಿಂದ ಉಂಟಾಗುವ ರೋಗ ಇದಾಗಿದೆ.
ನಾನು ಯಾವಾಗ ಕುಳಿತಿದ್ದೆ ಎಂಬುದು ನೆನಪಿಲ್ಲ ಎಂದಿದ್ದಾಳೆ. 1 – 2ನೇ ವಯಸ್ಸಿನಲ್ಲಿ ನನ್ನನ್ನು ಕುಳಿತುಕೊಳ್ಳಲು ನನ್ನ ತಾಯಿ ಪ್ರಯತ್ನ ಮಾಡಿದ್ದಳು. ಆದ್ರೆ ನಾನು ಆಗ ಕುಳಿತುಕೊಂಡಿದ್ದೆನಾ ಎಂಬುದು ನನಗೆ ತಿಳಿದಿಲ್ಲ. ನನಗೆ ಕುಳಿತುಕೊಳ್ಳಲು ಭಯವಾಗುತ್ತದೆ. ನನ್ನ ಪಾದಗಳು ಕೂಡ ಯಾವಾಗ ಬೇಕಾದ್ರೂ ಕೈಕೊಡಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.
ಜೋನ್ನಾ ಕ್ಲಿಚ್ ( 32 ವರ್ಷ) ಗೆ ಕಾಣಿಸಿಕೊಂಡಿರುವ ರೋಗ ಬಹಳ ಅಪರೂಪದ ಖಾಯಿಲೆಯಾಗಿದೆ. ಅತಿ ಕಡಿಮೆ ಜನರಿಗೆ ಇದು ಕಾಣಿಸಿಕೊಳ್ಳುತ್ತದೆ. ಸೊಂಟ ಮತ್ತು ಪಾದಗಳ ಮೂಳೆ ನೇರವಾಗಿರುವುದರಿಂದ ಆಕೆಗೆ ಯಾವುದೇ ಆಧಾರವಿಲ್ಲದೆ ನಿಲ್ಲಲೂ ಸಾಧ್ಯವಾಗ್ತಿಲ್ಲ. ಆಕೆಯ ಬೆನ್ನುಮೂಳೆಯ ಸ್ನಾಯುಗಳು ದುರ್ಬಲವಾಗಿವೆ. ಹಾಗಾಗಿ ನಡೆಯಲು ಸಾಧ್ಯವಾಗುವುದಿಲ್ಲ.
ಮೊದಲು ಸರ್ಕಾರಿ ಕೆಲಸ ಮಾಡಿದ್ದ ಜೋನಾ, ನಂತ್ರ ಬ್ಯೂಟಿ ಪಾರ್ಲರ್ ತೆರೆದಿದ್ದಳಂತೆ. 19 ಗಂಟೆಗಳ ಕಾಲ ನಿಂತು ಕೆಲಸ ಮಾಡ್ತಿದ್ದಳಂತೆ. ಆದ್ರೆ ಈಗ ಅದು ಸಾಧ್ಯವಿಲ್ಲ ನೋವಾಗುತ್ತದೆಯಂತೆ. ತನ್ನ ತೂಕ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನುತ್ತಾಳೆ ಆಕೆ. ತನ್ನ ಮಂಡಿ ಹಾಗೂ ಪಾದಗಳು ದುರ್ಬಲವಾಗಿದ್ದು, ಬೆನ್ನಿನ ಮೂಳೆ ಇಷ್ಟು ಭಾರವನ್ನು ಸಹಿಸುವುದಿಲ್ಲ ಎನ್ನುತ್ತಾಳೆ ಜೋನ್ನಾ ಕೆಲ ವರ್ಷಗಳ ಹಿಂದೆ 10 ಕೆ.ಜಿ ತೂಕ ಹೆಚ್ಚಾಗಿತ್ತು. ಆಗ ತುಂಬಾ ಕಷ್ಟವಾಗಿತ್ತು. 10 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದೇನೆ. ಆದ್ರೂ ಪರಿಸ್ಥಿತಿ ಬದಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಣ ಸಂಗ್ರಹಿಸಿ, ಶಸ್ತ್ರಚಿಕಿತ್ಸೆಗೊಳಗಾಗುವ ಪ್ಲಾನ್ ಇದೆಯೆಂದು ಜೋನ್ನಾ ಕ್ಲಿಚ್ ಹೇಳಿದ್ದಾಳೆ.