ಬೊಂಬಾಟ್ ಕಾರ್ ಚಿತ್ರದಂತೆಯೇ ಇದೆ ಇಲ್ಲೊಂದು ಬಣ್ಣದ ಕಾರ್!! ಆರು ತಿಂಗಳಿನಿಂದ ರಸ್ತೆ ಬದಿ ನಿಂತಿದ್ದ ಅದರೊಳಗೆ ಕೊಳೆತ್ತಿತ್ತೊಂದು ಶವ

ಸಿನಿಮಾ ಶೂಟಿಂಗ್ ಗೆಂದು ಬಳಸುತ್ತಿದ್ದ ಬಣ್ಣದ ಕಾರೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆಯೊಂದು ಬೆಂಗಳೂರಿನ ಮಾಗಡಿ ರಸ್ತೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಕೆಲ ಸಮಯಗಳಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಈ ಕಾರನ್ನು ಸಿನಿಮಾ ಶೂಟಿಂಗ್ ಗೆ ಬಳಸುತ್ತಿದ್ದರು. ಆದರೆ ಕಾರಿನ ಮಾಲೀಕ ಹೊಸ ಮನೆಗೆ ಶಿಫ್ಟ್ ಆಗುವ ವೇಳೆ ಕಾರನ್ನು ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿ ತೆರಳಿದ್ದು, ಬಣ್ಣ ಬಣ್ಣದ ಆ ಕಾರು ಸುಮಾರು ಆರು ತಿಂಗಳಿನಿಂದ ವಾರೀಸುದಾರರು ಇಲ್ಲದಂತೆಯೇ ಇತ್ತೆನ್ನಲಾಗಿದೆ.

ಆದರೆ ನಿನ್ನೆಯ ದಿನ ಕಾರಿನಿಂದ ಕೊಳೆತ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲಿಸಿದಾಗ ಕೊಳೆತ ಶವವೊಂದು ಕಂಡುಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಸುಮಾರು 40 ರಿಂದ 45 ವರ್ಷದ ವ್ಯಕ್ತಿಯ ಮೃತದೇಹವೆಂದು ಅಂದಾಜಿಸಲಾಗಿದ್ದು, ಶವದ ಪಕ್ಕದಲ್ಲೇ ಗುರುತಿನ ಚೀಟಿಯೊಂದು ದೊರೆತಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply