ರೋಲರ್ ಕೋಸ್ಟರ್ ಅವಾಂತರ | 45 ನಿಮಿಷ ತಲೆ ಕೆಳಗಾಗಿಯೇ ಇದ್ದ ಜನ!

ರೋಲರ್ ಕೋಸ್ಟರ್ ಎಂದರೆ ಹಲವಾರು ಮಂದಿ ಭಯ ಬೀಳುವುದು ಗ್ಯಾರಂಟಿ. ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ರೋಮಾಂಚನಕಾರಿ ಹಾಗೂ ಥ್ರಿಲ್ಲಿಂಗ್ ಫೀಲ್ ಕೊಡುವ, ಗಟ್ಟಿ ಹೃದಯ ಇರುವವರು ಮಾತ್ರ ಈ ಗೇಮ್ ನಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ಏನೋ ಸಾಹಸ ಮಾಡಿ, ಅದಕ್ಕೆ ಹತ್ತಿ ಆಮೇಲೆ ಜೀವಮಾನದಲ್ಲಿ ನಾನು ಅದಕ್ಕೆ ಹತ್ತಲ್ಲ ಎಂದು ಪಣತೊಟ್ಟವರು ಕೂಡಾ ಇದ್ದಾರೆ.

ಪುಕ್ಕಲುತನ ಇರುವವರು ಏನಾದರೂ ಈ ರೋಲರ್ ಕೋಸ್ಟರ್ ಗಳ ರೈಡ್ ಗೆ ಹೋದರೆಂದರೆ ಹೊಟ್ಟೆಯಲ್ಲಿರುವುದೆಲ್ಲಾ ಹೊರ ಬಂದು ಕೆಳಗೆ ಇಳಿಯುವಷ್ಟರಲ್ಲಿ ನಾಲ್ಕಾರು ಮಂದಿ ಅವರ ಆರೈಕೆ ಮಾಡಬೇಕಾಗುವುದು ಖಂಡಿತ.


Ad Widget

Ad Widget

Ad Widget

ಈ ರೋಲರ್ ಕೋಸ್ಟರ್ ತಿರುಗುತ್ತಾ ಆಕಾಶದೆತ್ತರಕ್ಕೆ ವೇಗವಾಗಿ ಕೊಂಡೊಯ್ದು ಅಲ್ಲಿ ಅರೆಕ್ಷಣ ತಲೆ ಕೆಳಗಾಗಿ ನಿಲ್ಲಿಸುತ್ತದೆ. ನಂತರ ಭಾರೀ ವೇಗದಲ್ಲಿ ಇಳಿಯುವುದು, ಅಂತಹ ತಿರುಗುವ ಕ್ಷಣ, ಎಂತಹವರನ್ನೂ ತಲೆ ತಿರುಗುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲೊಂದು ರೋಲರ್ ಕೋಸ್ಟರ್ ರೈಡರ್ ಗಳನ್ನು ಬರೋಬ್ಬರಿ 45 ನಿಮಿಷಗಳ ಕಾಲ ತಲೆ ಕೆಳಗಾಗಿ ನಿಲ್ಲಿಸಿದೆ ಎಂದರೆ ನೀವು ನಂಬುತ್ತೀರಾ?

ಇದು ಆಶ್ಚರ್ಯವಾದರೂ ನಂಬಬೇಕು. ಯುಎಸ್ ನ ಉತ್ತರ ಕ್ಯಾರೋಲಿನಾದಲ್ಲಿನ ಕ್ಯಾರೋವಿಂಡ್ಸ್ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದೆ.

ರೋಲರ್ ಕೋಸ್ಟರ್ ನಲ್ಲಿ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಇದರ ಪರಿಣಾಮ ರೋಲರ್ ಕೋಸ್ಟರ್ ಸ್ಥಗಿತಗೊಂಡಿದೆ. ಈ ರೋಲರ್ ಕೋಸ್ಟರ್ ಬರೋಬ್ಬರಿ 125 ಅಡಿ ಎತ್ತರದಲ್ಲಿತ್ತು. ಅದರಲ್ಲಿ ಜನ ಕೂಡಾ ಇದ್ದರು ಅಂದರೆ ಊಹಿಸಲೂ ಅಸಾಧ್ಯ. ಅದೂ ಸಹ ತಲೆ ಕೆಳಗಾಗಿ ಹೌದು, ಇಷ್ಟು ಎತ್ತರಕ್ಕೆ ಹೋದಾಗ ಸಮಸ್ಯೆ ಕಾಣಿಸಿಕೊಂಡಿದೆ. ಆಗ ಸರಿ ಹೋಗುತ್ತದೆ, ಈಗ ಸರಿ ಹೋಗುತ್ತದೆ. ಕೆಳಗೆ ಹೋಗಬಹುದು ಎಂದು ಕಾಯುತ್ತಾ ಕುಳಿತವರಿಗೆ ಭ್ರಮನಿರಸನ ಕಾದಿತ್ತು. ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಸಮಸ್ಯೆ ಪರಿಹರಿಸಿ ರೋಲರ್ ಕೋಸ್ಟರ್ ನ ಮೇಲಿದ್ದ ರೈಡರ್ ಗಳನ್ನು ಕೆಳಗಿಳಿಸಲು ಸಾಧ್ಯವೇ ಆಗಲಿಲ್ಲ.

ಸುಮಾರು 45 ನಿಮಿಷಗಳ ಪ್ರಯತ್ನದ ಬಳಿಕ ಸಮಸ್ಯೆ ಪರಿಹಾರ ಕಂಡು ರೈಡರ್ ಗಳು ಕೆಳಗೆ ಬಂದಿದ್ದಾರೆ. ನಿಟ್ಟುಸಿರನ್ನೂ ಬಿಟ್ಟಿದ್ದಾರೆ. ಪುಣ್ಯಕ್ಕೆ ಯಾರೊಬ್ಬರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಬಹುತೇಕ ಮಂದಿ ಇನ್ನೆಂದೂ ಇಂತಹ ರೋಲರ್ ಕೋಸ್ಟರ್ ರೈಡ್ ನ ಸಹವಾಸಕ್ಕೆ ಹೋಗುವುದೇ ಇಲ್ಲ ಎಂದು ಶಪಥ ಮಾಡಿರಲೂ ಬಹುದು ಎಂಬ ಸಂಶಯ ಕಾಡದೇ ಇರೋಕೆ ಸಾಧ್ಯವಿಲ್ಲ.

Leave a Reply

error: Content is protected !!
Scroll to Top
%d bloggers like this: