ಬೆಳಿಗ್ಗೆಯಿಂದಲೇ ಮೊಳಗಲಿದೆ ಹನುಮಾನ್ ಚಾಲಿಸ್, ಇಂದಿನ ಅಭಿಯಾನ ತಡೆಯಲು ಬಂದ್ರೆ ಸಂಘರ್ಷ ಗ್ಯಾರೆಂಟಿ ಎಂದು ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್
ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಹಿಂದೂಪರ ಸಂಘಟನೆಗಳು ಇಂದಿನಿಂದ ರಾಜ್ಯದ ದೇಗುಲಗಳಲ್ಲಿ ಹನುಮಾನ್ ಚಾಲೀಸಾ ಮೊಳಗಿಸಲಿದ್ದಾರೆ.
ಹಿಂದೂಸಂಘಟನೆಗಳ ಮುಖಂಡರು ಆಜಾನ್ ಸ್ಪೀಕರ್ ತೆರವಿಗೆ ಆಗ್ರಹಿಸಿದ್ದು, ಸರ್ಕಾರಕ್ಕೆ ಮೇ 3ರವರೆಗೆ ಗಡುವು ನೀಡಿದ್ದರು. ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುಪ್ರಭಾತ ಅಭಿಯಾನದ ಮೂಲಕ ಹನುಮಾನ್ ಚಾಲಿಸಾ ಪಠಣೆ ಮಾಡಲು ಹಿಂದೂಪರ ಸಂಘಟನೆಗಳು ತೀರ್ಮಾನ ಮಾಡಿದ್ದಾರೆ.
ಸರ್ಕಾರ ಧ್ವನಿವರ್ಧಕಗಳನ್ನು ತೆರವು ಮಾಡಿದರೆ ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುತ್ತೇವೆ. ಇಲ್ಲದಿದ್ದರೆ ಇಂದಿನಿಂದ ಹನುಮಾನ್ ಚಾಲಿಸಾ ಮೊಳಗಲಿವೆ. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂಬ ಎಚ್ಚರಿಕೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಈಗಾಗಲೇ ನೀಡಿದ್ದರು. ಸರ್ಕಾರ ಕ್ರಮ ತೆಗೆದುಕೊಳ್ಳದ ಕಾರಣ ಬೆಳಗ್ಗೆ 5 ಗಂಟೆಯಿಂದಲೇ ದೇಗುಲಗಳಲ್ಲಿ ರಾಮಜಪ ಮೊಳಗಲಿದೆ. ರಾಮನಾಮ, ಹನುಮಾನ್ ಚಾಲೀಸ್, ವೇದ ಮಂತ್ರ ಪಠಣೆಗೆ ಲೌಡ್ಸ್ಪೀಕರ್ ಮಾಡಿದ್ದಾರೆ.
ಗಲಭೆ, ಅಶಾಂತಿ ಎಲ್ಲವೂ ಮಸೀದಿಯ ಮೈಕ್ ಮೂಲಕ ಆಗುತ್ತಿದೆ. ಆದ್ದರಿಂದಲೇ ಯೋಗಿ ಸರ್ಕಾರ 60 ಸಾವಿರ ಮೈಕ್ ತೆರವುಗೊಳಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಅವರು ಏಕೆ ಗಟ್ಸ್ ತೋರಿಸುತ್ತಿಲ್ಲ? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಇಂದಿನ ಅಭಿಯಾನ ತಡೆಯಲು ಬಂದ್ರೆ ಸಂಘರ್ಷ ಗ್ಯಾರೆಂಟಿ. ಪೊಲೀಸರು ನಮ್ಮ ಅಭಿಯಾನ ತಡೆಯುವುದಲ್ಲ, ಮಸೀದಿಗಳಲ್ಲಿ ಮೈಕ್ ಅಳವಡಿಸುವುದನ್ನು ತಡೆಯಲಿ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.