ಮಾಜಿ ಸಚಿವರ ಚಿತ್ತ ಸನ್ಯಾಸದತ್ತ! ಸನ್ಯಾಸ ದೀಕ್ಷೆ ಸ್ವೀಕರಿಸಿದ ಯಡಿಯೂರಪ್ಪ ಆಪ್ತರು

ಮಾಜಿ ಸಚಿವ ಹಾಗೂ ಯಡಿಯೂರಪ್ಪ ಆಪ್ತ ಬಿ.ಜೆ.ಪುಟ್ಟಸ್ವಾಮಿಯವರು ಸನ್ಯಾಸಿಯಾಗಿ ಬದಲಾಗಿದ್ದಾರೆ. ಬಿ.ಜೆ. ಪುಟ್ಟಸ್ವಾಮಿ ಅವರು ಶುಕ್ರವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಪುಟ್ಟಸ್ವಾಮಿ ಅವರಿಗೆ ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳೆಂದು ನಾಮಕರಣ ಮಾಡಿ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳು ಸನ್ಯಾಸ ಧೀಕ್ಷೆ ನೀಡಿದರು.

ಮೇ 8ರಂದು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಕ್ಕೆ ತೆರಳಲಿದ್ದು, ಮೇ 15ರಂದು ಪ್ರಥಮ ಪೀಠಾಧಿಪತಿಯಾಗಿ ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳು ಅಲಂಕೃತಗೊಳ್ಳಿಲಿದ್ದಾರೆ.

ಬಿ.ಜೆ.ಪುಟ್ಟಸ್ವಾಮಿಯವರು ಗಾಣಿಗ ಸಮುದಾಯಕ್ಕೆ ಸೇರಿದವರು. ಅವರ ಸಮುದಾಯದ ಮಠ ರಾಜ್ಯದಲ್ಲಿ ಇರಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗಾಣಿಗ ಸಮುದಾಯಕ್ಕೆ ಮಠ ಕಟ್ಟಲು 8 ಎಕರೆ ಜಮೀನು ಮತ್ತು 5 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಜೊತೆಗೆ ದಾನಿಗಳಿಂದ ಹಣ ಸಂಗ್ರಹಿಸಿ ಗುರು ಪೀಠ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ನಿರ್ಮಿಸಲಾಗಿದೆ. ಇದಕ್ಕೆ ಮಠಾಧೀಶರನ್ನಾಗಿ ಮಾಡಲು ಹುಡುಕಾಟ ನಡೆಸಿದರೂ ಯಾರೂ ಸಿಕ್ಕಿಲ್ಲ. ಹೀಗಾಗಿ ಬಿ.ಜೆ.ಪುಟ್ಟಸ್ವಾಮಿಯವರೇ ಖಾವಿ ಧರಿಸಲು ತೀರ್ಮಾನಿಸಿ, ಈಗ ಸನ್ಯಾಸ ಧೀಕ್ಷೇ ಸ್ವೀಕರಿಸಿದ್ದಾರೆ.

ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಮಾಜಿ ಸಿಎಂ ಎಸ್​.ಎಂ. ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಸೇರಿ ಹಲವು ಸಚಿವರು ಭಾಗವಹಿಸಲಿದ್ದಾರೆ.

ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದೆನೆ ಎಂದು ಮಾಜಿ ಸಚಿವ ಹಾಗೂ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.ನನ್ನ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ಆತ್ಮ ತೃಪ್ತಿಯಲ್ಲಿ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ತಿಳಿಸಿದರು.

ನಮ್ಮ ಜನಾಂಗಕ್ಕೂ ಒಂದು ಗುರುಪೀಠ ಮಾಡಬೇಕು ಎಂದುಕೊಂಡು ಮೂವರು ಯುವಕರನ್ನ ಸಿದ್ದಗಂಗಾ ಮಠ, ಮುರುಗ ರಾಜೇಂದ್ರ ಮಠ, ರಾಜರಾಜೇಶ್ವರಿ ಮಠದಲ್ಲಿ ನಾನು ಸೇರಿಸಿದ್ದೆ. ಆದ್ರೆ ಕಾರಣಾಂತರಗಳಿಂದ ಅವರು ಹೊರಟು ಹೋದರು. ಕೊನೆಯದಾಗಿ ರಾಜರಾಜೇಶ್ವರಿ ಮಠದಲ್ಲಿ ಜಯತೀರ್ಥ ಸ್ವಾಮೀಜಿಗಳು ಯಾಗ ಮಾಡುತ್ತಿದ್ದಾಗ ನನ್ನನ್ನು ಕರೆದು ಪೀಠಾಧಿಪತಿ ಆಗಬೇಕಿದ್ದರೇ ಬದ್ಧತೆ ಇರಬೇಕು, ಹೀಗಾಗಿ ನೀವೇ ಮೊದಲ ಪೀಠಾಧ್ಯಕ್ಷರಾಗಿ ಆನಂತರ ಯೋಗ್ಯ ಶಿಷ್ಯರು ಬಂದಾಗ ಅವರನ್ನ ಪೀಠಾಧಿಪತಿ ಮಾಡಿ ಎಂದು ಆದೇಶಿಸಿದರು. ಅದರಂತೆ ನಾನೇ ಪೀಠಾಧ್ಯಕ್ಷನಾಗಲಿದ್ದೇನೆ. ನಾನು ಸಮಾಜ ಸುಧಾರಣಾ ಸ್ವಾಮೀಜಿಯಾಗಿ ದೀಕ್ಷೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಬಿ.ಜೆ.ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ .

https://hosakannada.com/2022/05/07/friends-wishes-first-night-through-banyner-wishes/
Leave A Reply

Your email address will not be published.