ತಂದೆಯ ಕೊನೆ ಆಸೆಯಂತೆ ಮುಸ್ಲಿಮರಿಗೆ ಭೂ ದಾನ ಮಾಡಿದ ಹಿಂದೂ ಸಹೋದರಿಯರು !!
ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಇತ್ತೀಚಿನ ದಿನಗಳಲ್ಲಿ ಧರ್ಮ ಸಂಘರ್ಷ ನಡೆಯುತ್ತಲೇ ಇದೆ. ಅಲ್ಲಲ್ಲಿ ಗಲಭೆಗಳು ಕೂಡ ನಡೆದುಹೋಗಿವೆ. ಆದರೆ ಈ ನಡುವೆಯೂ ಸೌಹಾರ್ದತೆ ಬೆಸೆಯುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದೂ ಸಹೋದರಿಯರಿಬ್ಬರು ತನ್ನ ತಂದೆಯ ಕೊನೆಯ ಆಸೆಯಂತೆ ಈದ್ಗಾಕ್ಕಾಗಿ ಸುಮಾರು 20,400 ಚದರ ಅಡಿ ಭೂಮಿಯನ್ನು ದಾನ ಮಾಡಿದ್ದಾರೆ.
ಡೆಹ್ರಾಡೂನ್ ನ ಸರೋಜಾ ರಸ್ತೋಗಿ ಹಾಗೂ ಅನಿತಾ ರಸ್ತೋಗಿ ಸಹೋದರಿಯರೇ ಈ ಭೂಮಿ ದಾನ ಮಾಡಿರುವುದು. ಇಲ್ಲಿನ ಬೈಲ್ಜುಡಿ ಗ್ರಾಮದ ಧೇಲಾ ನದಿಯ ಸೇತುವೆಯ ಬಳಿಯಿರುವ ಈದ್ಗಾವು ಈಗಾಗಲೇ ಸುಮಾರು 4 ಎಕರೆ ಭೂಮಿಯನ್ನು ಹೊಂದಿದೆ. ನೆನ್ನೆಯಷ್ಟೇ ಈ ಮೈದಾನದಲ್ಲಿ ಈದ್ಉಲ್ಫ್ರಿತ್ ಆಚರಣೆ ವೇಳೆ 20,000 ಮುಸ್ಲಿಮರು ನಮಾಜ್ ಮಾಡಿದ್ದರು.
ಇವರ ತಂದೆ ಲಾಲಾ ಬ್ರಿಜ್ನಂದನ್ ಪ್ರಸಾದ್ ರಸ್ತೋಗಿ ಅವರು ಈದ್ಗಾ ಸ್ಥಳದ ಪಕ್ಕದಲ್ಲೇ ಜಮೀನು ಹೊಂದಿದ್ದರು. ಅವರು ಎಲ್ಲಾ ಧರ್ಮವನ್ನು ಗೌರವಿಸುತ್ತಿದ್ದರು. ಹಿಂದೂ -ಮುಸ್ಲಿಮರ ನಡುವೆ ಬಾಂಧವ್ಯ ಬೆಸೆಯಲು ಸಹಾಯ ಮಾಡಲು ಬಯಸಿದ್ದರು. ಈ ಕೆಲಸ ಮಾಡುವುದಕ್ಕೂ ಮುನ್ನವೇ 2003ರಲ್ಲಿ ನಿಧನರಾದರು. ಸಾಯುವ ಮುನ್ನ ತಮ್ಮ ಮೂವರು ಮಕ್ಕಳಿಗೆ ಭೂಮಿ ಹಂಚಿಕೆ ಮಾಡಿದ್ದರು ಎನ್ನಲಾಗಿದೆ.
ಸರೋಜಾ ಉತ್ತರ ಪ್ರದೇಶದ ಮೀರತ್ನಲ್ಲಿ ಹಾಗೂ ಅನಿತಾ ದೆಹಲಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ತಮ್ಮ ತಂದೆ ನಿಧನರಾದ 19 ವರ್ಷಗಳ ನಂತರ ತಮ್ಮ ಸ್ವಗ್ರಾಮ ಜಸ್ಪುರಕ್ಕೆ ಬಂದು, ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದರು. ನಂತರ ತಮ್ಮ ತಂದೆಯ ಆಸೆಯಂತೆ ಇಬ್ಬರು ಸಹೋದರಿಯರೂ ನಿರ್ಧರಿಸಿ ಭೂಮಿ ದಾನ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾವಂತು ಏನೂ ಮಾಡಿಲ್ಲ. ನಮ್ಮ ತಂದೆಯ ಆಸೆಯಂತೆ ಭೂಮಿಯನ್ನು ದಾನ ಮಾಡಿದ್ದೇವೆ. ಅವರು ಎಲ್ಲ ಧರ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದರು. ನಮಾಜ್ ಆಚರಿಸಲು ಪ್ರತಿ ವರ್ಷ ಈದ್ಗಾ ಸಮಿತಿಗೆ ಸ್ವಲ್ಪ ಹಣವನ್ನು ನೀಡುತ್ತಿದ್ದರು ಎಂದು ಭಾವುಕರಾಗಿದ್ದಾರೆ.
ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಈದ್ಗಾ ಸಮಿತಿಯ ಮುಖ್ಯಸ್ಥ ಹಸೀನ್ ಖಾನ್, ದೇಶವೇ ಕೋಮುಗಲಭೆಯ ಉನ್ಮಾದದಿಂದ ತತ್ತರಿಸುತ್ತಿರುವಾಗ ಇಂತಹ ಬೆಳವಣಿಗೆ, ಈ ಸಹೋದರಿಯರ ಒಂದು ಕಾರ್ಯ ಶ್ಲಾಘನೀಯವಾಗಿದೆ. ಇದು ಇತರ ಧರ್ಮಗಳಿಗೆ ಗೌರವ ತೋರಿಸುವ ಉತ್ತಮ ಉದಾಹರಣೆ. ನಮ್ಮ ಮುಸ್ಲಿಂ ಸಮುದಾಯವು ರಸ್ತೋಗಿ ಕುಟುಂಬದ ಕೊಡುಗೆಯನ್ನು ಎಂದಿಗೂ ಮರೆಯುವುದಿಲ್ಲ. ಇದು ಎರಡು ಸಮುದಾಯಗಳ ನಡುವೆ ಕೋಮು ಸೌಹಾರ್ದತೆಯನ್ನು ಬಲಪಡಿಸುತ್ತದೆ. ನಾವು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಗಡಿ ಗೋಡೆ ನಿರ್ಮಿಸಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.