ಕಂಬಳಾಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ!! | ಕಂಬಳ ಕ್ರೀಡೆಯಲ್ಲಿ ಆಗಲಿದೆಯೇ ಮಹತ್ತರ ಬದಲಾವಣೆ!??
ಕರಾವಳಿಯ ಜಾನಪದ ಕ್ರೀಡೆ ಕಂಬಳ. ಶತ ಶತಮಾನಗಳ ಐತಿಹಾಸಿಕ ಪರಂಪರೆಯಿರುವ ಈ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಕಂಬಳ ಕ್ರೀಡೆಯನ್ನು ಉಳಿಸಿ, ಬೆಳೆಸುವುದಕ್ಕಾಗಿ ಕಂಬಳ ಅಸೋಸಿಯೇಷನ್ ರಚಿಸಲು ಸರ್ಕಾರ ನಿರ್ಧರಿಸಿದೆ.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ನಿನ್ನೆ ವಿಧಾನ ಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಾರ್ಚ್ ತಿಂಗಳಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷದ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಇತರ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಸಭಾಪತಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಕಂಬಳ ಕ್ರೀಡೆಯನ್ನು ಹೆಚ್ಚು ಸಂಘಟಿತವಾಗಿ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಲು ರಾಜ್ಯ ಮಟ್ಟದ ಕಂಬಳ ಅಸೋಸಿಯೇಷನ್ ರಚಿಸಬೇಕು. ಇದಕ್ಕೆ ಕ್ರೀಡಾ ಇಲಾಖೆಯ ಅನುಮೋದನೆ, ರಾಜ್ಯ ಸರಕಾರದಿಂದ ಅನುದಾನ ಪಡೆಯಬೇಕು. ಬಳಿಕ ಎಲ್ಲ ಜಿಲ್ಲಾ ಮತ್ತು ಸ್ಥಳೀಯ ಕಂಬಳ ಸಮಿತಿಗಳನ್ನು ರಾಜ್ಯ ಮಟ್ಟದ ಅಸೋಸಿಯೇಷನ್ ನಲ್ಲಿ ನೋಂದಾಯಿಸಿ ಪ್ರತ್ಯೇಕ ಬೈಲಾ ರಚಿಸಿ ಸ್ಥಳೀಯ ಕಂಬಳ ಸಮಿತಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೇಲ್ಮನೆಯಲ್ಲಿ ನಡೆದ ಚರ್ಚೆ ಮತ್ತು ಅಭಿಪ್ರಾಯಗಳಿಗೆ ಪೂರಕವಾಗಿ ಸಭಾಪತಿ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಹಾಜರಿದ್ದು, ಕಂಬಳ ಅಸೋಸಿಯೇಷನ್ ರಚನೆಗೆ ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಕರಾವಳಿ ಜಿಲ್ಲೆಯ ಕಂಬಳ ಪ್ರಿಯರು ಬಹಳ ಖುಷಿಯಿಂದಲೇ ಸ್ವಾಗತಿಸಿದ್ದಾರೆ.