ಮಂಗಳೂರು: ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣ ; ಮೂವರಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್

ಮಂಗಳೂರು: 2017ರ ಅಕ್ಟೋಬರ್ 4ರಂದು ನಡೆದಿದ್ದ ಮುಕ್ಕಚ್ಚೇರಿಯ ಜುಬೇರ್ ಎಂಬಾತನ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶರಾದ ಬಿ.ಬಿ ಜಕಾತಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ಕಚ್ಚೇರಿ ಮಸೀದಿ ಎದುರು ಈ ಕೊಲೆ ನಡೆದಿತ್ತು.

ನಿಜಾಮ್ ಆಲಿಯಾಸ್ ನಿಜಾಮುದ್ದೀನ್, ತಾಜು ಆಲಿಯಾಸ್ ತಾಜುದ್ದೀನ್ ಮತ್ತು ಮುಸ್ತಾಫ ಅಲಿಯಾಸ್ ಮೊಹಮ್ಮದ್ ಮುಸ್ತಫಾ ಶಿಕ್ಷೆಗೊಳಗಾದವರು.

ಘಟನೆ ವಿವರ : ಝುಬೈರ್ ಮತ್ತು ಆಸಿಫ್ ಎಂಬವರಿಗೆ ಮಸೀದಿ ವಿಷಯದಲ್ಲಿ ಗಲಾಟೆ ನಡೆದಿತ್ತು ಹಾಗಾಗಿ ದ್ವೇಷ ಬೆಳೆಸಿಕೊಂಡಿದ್ದರು. 2016ರಲ್ಲಿ ರಂಝಾನ್ ಹಬ್ಬದ ಹಿಂದಿನ ದಿನ ಝುಬೈರ್‌ಗೆ ಮುಕ್ಕಚ್ಚೇರಿಯಲ್ಲಿ ಆಸಿಫ್ ಮತ್ತು ಆತನ ಗೆಳೆಯ ಅಲ್ತಾಫ್ ಎಂಬವರು ಹೊಡೆದಿದ್ದರು.

ಇವರ ವಿರುದ್ಧ ಝುಬೈರ್ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಅಲ್ಲದೆ ಅಲ್ತಾಫ್ ವಿರುದ್ಧ ಗೂಂಡಾ ಕಾಯಿದೆ ಹಾಕಲಾಗಿತ್ತು.

ಈ ಹಿನ್ನೆಲೆಯಲ್ಲಿ ಝುಬೈರ್ ಮೇಲೆ ಅಲ್ತಾಫ್‌ಗೆ ದ್ವೇಷವಿತ್ತು. 2017ರ ಅ.4ರಂದು ಸಂಜೆ ಅಲ್ತಾಫ್, ಆಸಿಫ್ ಮತ್ತು ಸುಹೈಲ್ ಸೇರಿ ಝುಬೈರ್ ರನ್ನು ಕೊಲೆ ಮಾಡುವ ಬಗ್ಗೆ ಒಳಸಂಚು ನಡೆಸಿದ್ದರು.
ಅಂದು ರಾತ್ರಿ 7.55ಕ್ಕೆ ಝುಬೈರ್ ತನ್ನ ಗೆಳೆಯ ಇಲ್ಯಾಸ್ ಎಂಬವರೊಂದಿಗೆ ಮಸೀದಿ ಎದುರಿನ ರಸ್ತೆಯಲ್ಲಿ ಬೈಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸುಹೈಲ್, ನಿಝಾಮ್, ತಾಜುದ್ದೀನ್ ಮತ್ತು ಮುಸ್ತಾಫ ತಲ್ವಾರ್‌ನೊಂದಿಗೆ ಬಂದು ಝುಬೈರ್ ರನ್ನು ಕಡಿದು ಕೊಲೆ ಮಾಡಿದ್ದರು.

ತಡೆಯಲು ಬಂದ ಇಲ್ಯಾಸ್ ಅವರ ಕೈಗೆ ಕಡಿದಿದ್ದರು. ಅಂದಿನ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ 5ನೇ ಆರೋಪಿ ಅಲ್ತಾಫ್ ಮೃತಪಟ್ಟಿದ್ದ. ಪ್ರಮುಖ ಆರೋಪಿ ಸುಹೈಲ್ ತಲೆಮರೆಸಿಕೊಂಡಿದ್ದಾನೆ.

ನಿಝಾಮುದ್ದೀನ್, ತಾಜುದ್ದೀನ್ ಮತ್ತು ಮುಸ್ತಾಫನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಜೊತೆಗೆ 20,000 ರೂ. ದಂಡ, ದಂಡದ ಹಣ ಕಟ್ಟಲು ತಪ್ಪಿದರೆ ಹೆಚ್ಚುವರಿಯಾಗಿ 4 ತಿಂಗಳು ಜೈಲು ಶಿಕ್ಷೆ ಹಾಗೂ ಐಪಿಸಿ ಕಲಂ 326ರಡಿ ಎಸಗಿದ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ವಿಧಿಸಿ ಹಾಗೂ ದಂಡದ ಮೊತ್ತದಲ್ಲಿ 50,000 ರೂ.ಗಳನ್ನು ಕೊಲೆಯಾದ ಝುಬೈರ್ ಅವರ ತಂದೆಗೆ ನೀಡುವಂತೆ ಹಾಗೂ ಗಾಯಾಳುವಾಗಿದ್ದ ಇಲ್ಯಾಸ್ ಅವರಿಗೆ 20,000 ನೀಡಲು ಮತ್ತು ಝುಬೈರ್ ತಂದೆಗೆ
ಮತ್ತು ಗಾಯಾಳುವಿಗೆ ಸೂಕ್ತ ಪರಿಹಾರ ನೀಡಲು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.

Leave A Reply

Your email address will not be published.