ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕ ನೀಡಿದ ಶಿಕ್ಷೆ ಏನು ಗೊತ್ತಾ !?| ಈತನ ಎಡವಟ್ಟಿನಿಂದ ಮಕ್ಕಳು ಆಸ್ಪತ್ರೆಗೆ ದಾಖಲು
ಮಕ್ಕಳು ತಪ್ಪು ಮಾಡಿದರೆ ಶಿಕ್ಷಕರು ಶಿಕ್ಷಿಸುವುದು ಸಹಜ. ಆದರೆ ಇಲ್ಲೊಂದು ಕಡೆ ಶಿಕ್ಷಕನ ಶಿಕ್ಷೆಗೆ ವಿದ್ಯಾರ್ಥಿಗಳು ಆಸ್ಪತ್ರೆ ಸೇರುವ ಪರಿಸ್ಥಿತಿ ತಲುಪಿದೆ. ಹೌದು. ಸರ್ಕಾರಿ ಶಾಲೆಯ ಶಿಕ್ಷಕನೋರ್ವ ಬಸ್ಕಿ ಹೊಡಿಸಿದ್ದರಿಂದ ಏಳು ಮಂದಿ ವಿದ್ಯಾರ್ಥಿನಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ.
ಬೋಲಂಗಿರ್ ಜಿಲ್ಲೆಯ ಪಟ್ನಾಗರ್ ಪ್ರದೇಶದ ಬಾಪೂಜಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶಿಕ್ಷಕನನ್ನು ಬಿಕಾಶ್ ಧರುವಾ ಎಂದು ಗುರುತಿಸಲಾಗಿದೆ.
ಪ್ರಾರ್ಥನಾ ಅವಧಿ ಮುಗಿದ ನಂತರ ಶಾಲೆಗೆ ತಡವಾಗಿ ಬಂದಿದ್ದರಿಂದ 100 ಸಲ ಬಸ್ಕಿ ಹೊಡೆಯುವಂತೆ ಬಿಕಾಶ್ ಧರುವಾ ಅವರು ವಿದ್ಯಾರ್ಥಿಗಳಿಗೆ ಒತ್ತಾಯಿಸಿದ್ದಾರೆ. ಬಲವಂತವಾಗಿ ಬಸ್ಕಿ ಹೊಡೆಯುವ ವೇಳೆ ಕೆಲವು ವಿದ್ಯಾರ್ಥಿಗಳು ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ. ಹೀಗಾಗಿ ಕೂಡಲೇ ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿಗಳು ಆಂಬ್ಯುಲೆನ್ಸ್‍ನಲ್ಲಿ ಪಟ್‍ನಗರ ಉಪ-ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದ ವೇಳೆ ಬಾಲಕಿಯರು ಅಸ್ವಸ್ಥಗೊಂಡಿದ್ದರು. ಆದರೆ ಪ್ರಾಥಮಿಕ ಚಿಕಿತ್ಸೆ ನಂತರ ಆರೋಗ್ಯ ಸ್ಥಿರವಾಯಿತು ಎಂದು ಪಟ್ನಾಗಢ ಉಪವಿಭಾಗೀಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಲೆ ಮತ್ತು ಸಮೂಹ ಶಿಕ್ಷಣ ಸಚಿವರು, ಬೋಲಾಂಗಿರ್‍ನ ಪಟ್ನಾಗರ್ ಪ್ರದೇಶದ ಬಾಪೂಜಿ ಹೈಸ್ಕೂಲ್‍ನಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಶಿಕ್ಷೆ ವಿಧಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.