ಕಂಠಪೂರ್ತಿ ಮದ್ಯಪಾನ ಸೇವಿಸಿ, ಈಜಲು ಕಾಲುವೆಗೆ ಹಾರಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ವ್ಯಕ್ತಿಗಳು ಏನು ಮಾಡುತ್ತಾರೆಂದು ಅರಿವು ಅವರಿಗಿರುವುದಿಲ್ಲ. ಅಂಥದ್ದೇ ಒಂದು ಪ್ರಕರಣ ಈಗ ನಡೆದಿದೆ.
ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಈಜಲೆಂದು ಕಾಲುವೆಗೆ ಹಾರಿದ್ದು, ನಂತರ ಸಹಾಯಕ್ಕಾಗಿ ಕಿರುಚಿದ್ದಾನೆ.

ಘಟನೆ ಹಿನ್ನೆಲೆ : ಕಾಲುವೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ಠಾಣೆಯ ಆರಕ್ಷಕರೊಬ್ಬರು ಸಹೋದರರಿಬ್ಬರ ಸಹಾಯದಿಂದ ರಕ್ಷಿಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ನಿಡಗುಂದಿ ಪೊಲೀಸ್ ಠಾಣೆಯ ಪೇದೆ ಎಸ್ಎಸ್ ಅಂಗಡಗೇರಿ ತಮ್ಮ ಠಾಣೆಯಿಂದ ಪೆಟ್ರೋಲ್ ಬಂಕಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ನಿಡಗುಂದಿ ತಾಂಡಾ ಬಳಿ ಕಾಲುವೆಯ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಕೂಗಾಟ ನಡೆಸಿದ. ಇದನ್ನು ಕಂಡ ಎಸ್ಎಸ್ ಅಂಗಡಗೇರಿ ದೌಡಾಯಿಸಿದ್ದಾರೆ. ಕಾಲುವೆಯ ಪಕ್ಕದಲ್ಲಿದ್ದ ಸೀರೆಯೊಂದನ್ನು ಕಾಲುವೆಗೆ ಹಾಕಿ ಅದನ್ನು ಹಿಡಿದುಕೊಳ್ಳುವಂತೆ ಆ ವ್ಯಕ್ತಿಯನ್ನು ಕೇಳಿದಾಗ ನೀರಿನ ರಭಸಕ್ಕೆ ಸಾಧ್ಯವಾಗಿಲ್ಲ. ಅಷ್ಟರಲ್ಲಿ ಪೊಲೀಸ್ ಪೇದೆಯ ನೆರವಿಗೆ ಧಾವಿಸಿದ ಸಹೋದರರು
ಕಾಲುವೆಗೆ ಹಾರಿದ್ದಾರೆ. ನಂತರ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.

ಬಳಿಕ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆತನನ್ನು ನಿಡಗುಂದಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಬಸವರಾಜ ಧನಶೆಟ್ಟಿ (46) ಎಂದು ಗುರುತಿಸಲಾಗಿದೆ. ಈತ ಮದ್ಯ ಸೇವಿಸಿ ಈಜಾಡಲು ಕಾಲುವೆಗೆ ಜಿಗಿದಿದ್ದಾನೆ. ಈತನ ಜೊತೆಯಲ್ಲಿದ್ದ ಸ್ನೇಹಿತ ಕೂಡ ಮದ್ಯ ಸೇವಿಸಿದ್ದು, ಬಸವರಾಜ ಧನಶೆಟ್ಟಿಯ ಮೊಬೈಲ್ ಆತನ ಬಳಿಯೇ ಇಟ್ಟುಕೊಂಡಿದ್ದ. ಧನಶೆಟ್ಟಿ ನೀರಲ್ಲಿ ಮುಳುಗುತ್ತಿದ್ದನ್ನು ಗಮನಿಸಿದ ಗೆಳೆಯ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂದು ಕಾಲುವೆ ಪಕ್ಕದಲ್ಲಿ ನಿಂತು ಕೂಗಾಡಿದ್ದಾನೆ. ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಪೇದೆ ಎಸ್ಎಸ್ ಅಂಗಡಗೇರಿ ಸ್ಥಳಕ್ಕೆ ಧಾವಿಸಿ ಸಹಾಯ ಮಾಡಿದ್ದಾರೆ.

ಕಾಲುವೆಗೆ ಬಿದ್ದಿದ್ದ ಬಸವರಾಜ ಧನಶೆಟ್ಟಿಗೆ ಈಜು ಬರುತ್ತಿದ್ದರೂ ಮದ್ಯದ ಅಮಲಿನಲ್ಲಿ ಈಜಾಡಲು ಸಾಧ್ಯವಾಗಿಲ್ಲ. ಸುಮಾರು ಅರ್ಧ ಕಿಮೀಗೂ ಹೆಚ್ಚು ದೂರ ಕಾಲುವೆಯಲ್ಲಿಯೇ ಹರಿದುಕೊಂಡು ಹೋಗಿದ್ದಾನೆ. ಈ ಸಂದರ್ಭ ಸಮಯ ಪ್ರಜ್ಞೆ ಮೆರೆದ ಪೊಲೀಸ್ ಹಾಗೂ ಸಹೋದರರಿಬ್ಬರೂ ನೀರು ಪಾಲಾದ ವ್ಯಕ್ತಿಯನ್ನು ಹೊರಗೆ ತಂದು ಆತನ ಜೀವ ಉಳಿಸಿ, ಎಲ್ಲರಿಂದಲೂ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.

Leave A Reply