ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ ಜೋಡಿಗೆ ತಡೆಗೋಡೆಯಾದ ‘ಜಾತಿ’|ಮದುವೆ ಮುರಿದುಬಿತ್ತೆಂದು ಸಾವಿನಲ್ಲಿ ಒಂದಾದ ಅಮರ ಪ್ರೇಮಿಗಳು
ಧಾರವಾಡ :ಪ್ರೀತಿಸಿ ಒಟ್ಟಾಗಿ ಜೀವನ ನಡೆಸಬೇಕೆಂದು ಸಪ್ತಪದಿ ತುಳಿಯಲು ತಯಾರಾದ ಜೋಡಿಗೆ ‘ಜಾತಿ’ ಎಂಬ ತಡೆಗೋಡೆ ಅಡ್ಡ ನಿಂತಿದೆ.ಈ ಮದುವೆ ಬೇಡವೆಂದು ಪೋಷಕರು ಮದುವೆಗೆ ನಿರಾಕರಿಸಿದ್ದು, ಮನನೊಂದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ತಡಹಾಳ ಗ್ರಾಮದ ಸಾವಿತ್ರಿ ಎಂಬ ಯುವತಿ ಮತ್ತು ಬಸವರಾಜ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಪ್ರೀತಿ ಮುಂದೆ ಜಾತಿ ಇಲ್ಲ ಎಂಬಂತೆ ಅನ್ಯೋನ್ಯವಾಗಿದ್ದ ಜೋಡಿ, ಮದುವೆಯ ಕನಸು ಕಂಡಿದ್ದರು. ಆದರೆ ಬಸವರಾಜ್ ಅನ್ಯಜಾತಿಯ ಹುಡುಗ ಎಂದು ಸಾವಿತ್ರಿ ಮನೆಯವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಅಲ್ಲದೆ ಸಾವಿತ್ರಿಯನ್ನ ಬೇರೆಯವರೊಟ್ಟಿಗೆ ಮದುವೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು.ನಾ ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆ ಯಾರನ್ನು ಮದುವೆ ಆಗುವುದೆಲ್ಲವೆಂದು ಜೋಡಿಗಳಿಬ್ಬರು ನಿರ್ಧರಿಸಿ, ಸಾವಿನಲ್ಲಿ ಜೊತೆಯಾದರು.
ಹೌದು. ಈ ವಿಚಾರವಾಗಿ ಮನನೊಂದ ಪ್ರೇಮಿಗಳಿಬ್ಬರು ವಿಷ ಸೇವಿಸಿದ್ದಾರೆ. ವಿಷ ಸೇವಿಸಿ ಕೆಲವೇ ಕ್ಷಣಗಳಲ್ಲಿ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಮೊದಲು ಇಬ್ಬರನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು,ನಂತರ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದರು ಮಾರ್ಗ ಮಧ್ಯದಲ್ಲಿಯೇ ಸಾವಿತ್ರಿ ಕೊನೆಯುಸಿರೆಳೆದಿದ್ದಾಳೆ.ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಬಸವರಾಜ್ ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಬಡವನಾದರೂ ಪಿಎಸ್‌ಐ ಆಗಬೇಕೆಂದು ಕನಸು ಕಂಡಿದ್ದ ಯುವಕ,ಪರೀಕ್ಷೆ ಸಹ ಬರೆದು ಭವಿಷ್ಯದ ಬಗ್ಗೆ ಎದುರು ನೋಡುತ್ತಿದ್ದ. ಇದರ ನಡುವೆ ತನ್ನ ಪ್ರೇಯಸಿಗೆ ಬಾಳು ಕೊಡಬೇಕೆಂದು ನಿರ್ಧರಿಸಿದ್ದ. ಇನ್ನೇನು ಒಂದೇ ದಿನ, ಬೆಳಗಾದರೆ ಮದುವೆ ಎಂದುಕೊಂಡಿದ್ದ ಜೋಡಿಯ ಬಾಳಲ್ಲಿ ದುರಂತ ಅಂತ್ಯ ಕಂಡಿದೆ.ಇನ್ನು ಇತ್ತ ಮದುವೆ ನಿರಾಕರಿಸಿದ್ದ ಮನೆಯವರು, ಯುವಕ ಮತ್ತು ಯುವತಿಯ ಆತ್ಯಹತ್ಯೆ ನಿರ್ಧಾರದಿಂದಾಗಿ ಶೋಕದಲ್ಲಿ ಮುಳುಗುವಂತಾಗಿದೆ.