ಯೂಟ್ಯೂಬ್ ನೋಡಿ ಗರ್ಭಪಾತದ ಸಾಹಸಕ್ಕೆ ಕೈ ಹಾಕಿದ ಬಾಲಕಿ !! | ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ ಅಪ್ರಾಪ್ತೆ – ಪ್ರಿಯಕರ ಅರೆಸ್ಟ್

ಇತ್ತೀಚಿನ ಮಕ್ಕಳು ಏನೇ ಕೆಲಸ ಮಾಡುವುದಿದ್ದರೂ ಒಮ್ಮೆ ಯೂಟ್ಯೂಬ್ ಅನ್ನು ರೆಫರ್ ಮಾಡುತ್ತಾರೆ. ಅದು ಉತ್ತಮ ಕಾರ್ಯಕ್ಕಾದರೆ ಒಳ್ಳೆಯದು, ಆದರೆ ಕೆಟ್ಟ ಸಾಹಸಕ್ಕೆ ಇದು ಬಳಕೆಯಾಗಬಾರದು. ಆದರೆ ಇಲ್ಲೊಬ್ಬಳು ಬಾಲಕಿ ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಮುಂದಾಗಿ ಆಸ್ಪತ್ರೆ ಸೇರಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ನಾಗ್ಪುರದ ನಾರ್ಖೇಡ್‌ನ 17 ವರ್ಷದ ಬಾಲಕಿ, ನೆರೆಮನೆಯ 27 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ವರ್ಷ ಯುವಕನಿಗೆ ನಾಗ್ಪುರದ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಹಾಗಾಗಿ, ಆತ ನಾಗ್ಪುರದ ಐಎಂಡಿಸಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಕೆಲ ತಿಂಗಳ ಹಿಂದೆ ಬಾಲಕಿ ನಾರ್ಖೇಡ್‌ನಿಂದ ನಾಗ್ಪುರದ ತನ್ನ ಗೆಳೆಯನ ಕೋಣೆಗೆ ಹೋಗಿದ್ದಳು. ಅಲ್ಲಿ, ಇಬ್ಬರ ನಡುವೆ ಲೈಂಗಿಕ ಸಂಪರ್ಕ ಏರ್ಪಟ್ಟಿದೆ.

ಇತ್ತೀಚಿಗೆ ಬಾಲಕಿಗೆ ತಾನು ಗರ್ಭಿಣಿಯಾಗಿದ್ದೇನೆ ಎಂಬ ವಿಚಾರ ಗೊತ್ತಾಗಿದೆ. ಮನೆಯವರಿಗೆ ವಿಷಯ ಗೊತ್ತಾಗದಂತೆ ಗರ್ಭ ತೆಗೆಯಲು ಮುಂದಾದ ಆಕೆ, ಪ್ರಿಯಕರನಿಗೆ ವಿಷಯ ತಿಳಿಸಿದ್ದಳು. ಆತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಕೆಲ ಔಷಧಿಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದ. ಆದರೆ, ಅದರಿಂದ ಗರ್ಭಪಾತ ಆಗಿರಲಿಲ್ಲ.

ಹಾಗಾಗಿ, ಯೂಟ್ಯೂಬ್ ಮೊರೆ ಹೋದ ಬಾಲಕಿ, ಯಾವುದೋ ವೀಡಿಯೋದಲ್ಲಿ ಹೇಳಿದಂತೆ ಕಷಾಯ ಮಾಡಿ ಕುಡಿದಿದ್ದಳು. ಇದರಿಂದ ಆಕೆಗೆ ಗರ್ಭಪಾತ ಆಗಿದೆ, ಹಾಗೆಯೇ ಆಕೆಯ ಅರೋಗ್ಯ ಸ್ಥಿತಿಯೂ ಹದೆಗೆಟ್ಟಿದೆ. ವಿಷಯ ತಿಳಿದು ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಬಾಲಕಿ ನಡೆದ ಎಲ್ಲಾ ವಿಷಯವನ್ನು ಪೋಷಕರಲ್ಲಿ ಬಾಯಿಬಿಟ್ಟಿದ್ದಾಳೆ. ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದ ಪ್ರಿಯತಮನ ವಿರುದ್ಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Leave A Reply