ತಡರಾತ್ರಿ ಐಷಾರಾಮಿ ಪಬ್ ಒಂದಕ್ಕೆ ಪೊಲೀಸರ ದಿಢೀರ್ ದಾಳಿ !! | ಜನಪ್ರಿಯ ನಟಿ, ಗಾಯಕ, ರಾಜಕಾರಣಿ ಸೇರಿದಂತೆ 144 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಐಷಾರಾಮಿ ಪಬ್ ಒಂದರಲ್ಲಿ ನಿಗದಿತ ಸಮಯವನ್ನು ಮೀರಿ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ಏಕಾಏಕಿ ದಾಳಿ ನಡೆಸಿ ಟಾಲಿವುಡ್ ನಟ ನಾಗಬಾಬು ಅವರ ಪುತ್ರಿ ಜನಪ್ರಿಯ ನಟಿ ನಿಹಾರಿಕಾ ಕೊನಿಡೆಲಾ, ಗಾಯಕ ರಾಹುಲ್ ಸಿಪ್ಲಿಗಂಜ್ ಹಾಗೂ ರಾಜಕಾರಣಿ ಸೇರಿದಂತೆ 144 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ನಡೆದಿದೆ.

ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲಾ, ಗಾಯಕ ರಾಹುಲ್ ಸಿಪ್ಲಿಗಂಜ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಡರಾತ್ರಿ 3 ಗಂಟೆ ವೇಳೆಗೆ ಈ ದಾಳಿ ನಡೆದಿದ್ದು, ಹಲವು ಸೆಲೆಬ್ರಿಟಿಗಳ ಮಕ್ಕಳು ಮಾದಕ ವಸ್ತು ಸೇವನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ವೇಳೆ ಬೃಹತ್ ಪ್ರಮಾಣದ ಕೊಕೆನ್ ನ್ನೂ ವಶಪಡಿಸಿಕೊಳ್ಳಲಾಗಿದೆ.

ನಟಿ ನಿಹಾರಿಕಾ ಕೊನಿಡೆಲಾ ಅವರು ಟಾಲಿವುಡ್ ನಟ ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ. ಗಾಯಕ ರಾಹುಲ್ ಈ ಹಿಂದೆ ಬಿಗ್ ಬಾಸ್ ವಿನ್ನರ್‍ ಆಗಿದ್ದರು. ಬಂಧಿತರ ಪೈಕಿ ಓರ್ವ ರಾಜಕಾರಣಿಯೂ ಸೇರಿದ್ದಾರೆ. ಬಂಧಿತರನ್ನು ವಿಚಾರಣೆಗೊಳಿಸಿ ಬಳಿಕ ನಿಹಾರಿಕಾ ಹಾಗೂ ರಾಹುಲ್ ಅವರನ್ನು ಬಿಡುಗಡೆಗೊಳಿಸಿದ್ದಾರೆ.

‘ಡ್ರಗ್ಸ್ ಮುಕ್ತ ಹೈದರಾಬಾದ್’ ಅಭಿಯಾನದ ಅಡಿಯಲ್ಲಿ ಪೊಲೀಸರು ಬಂಧಿಸಿರುವವರಲ್ಲಿ ಗಾಯಕ ಹಾಗೂ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಈ ಅಭಿಯಾನದ ಗೀತೆಯನ್ನು ಕೂಡ ಇವರು ಹಾಡಿದ್ದರು. ಇನ್ನು ನಿಹಾರಿಕಾ ತಂದೆ ನಾಗಬಾಬು ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಿಹಾರಿಕಾ ಪಬ್ ಗೆ ಹೋಗಿದ್ದಾರಾದರೂ ಪಾರ್ಟಿಯಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದಾರೆ. ಆದರೂ ಸ್ಥಳದಲ್ಲಿದ್ದ ನಟಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.

Leave A Reply