SSLC ಎಕ್ಸಾಮ್ ಟೈಮಲ್ಲಿ ಮಾಂಗಲ್ಯ ಕಟ್ಟಿಸಿಕೊಳ್ಳುವ ಪರೀಕ್ಷೆ ಎದುರಿಸಿದ ವಿದ್ಯಾರ್ಥಿನಿ !! |ಬಾಲ್ಯ ವಿವಾಹದ ಗುಟ್ಟು ರಟ್ಟಾಗುವ ಭಯಕ್ಕೆ ತಾಳಿ ಬಿಚ್ಚಿಸಿ ಮರುದಿನ ಪರೀಕ್ಷೆಗೆ ಕಳುಹಿಸಿದ ಹೆತ್ತವರು
ದೇಶದಲ್ಲಿ ಬಾಲ್ಯ ವಿವಾಹ ನಿಷೇಧವಿದೆ. ಆದರೂ ಕೆಲವು ಕಡೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದು ಅಪರಾಧ ಎಂದು ತಿಳಿದಿದ್ದರೂ ಸಹ ಪೋಷಕರು ಪರೀಕ್ಷೆಯ ನಡುವೆಯೇ 10ನೇ ತರಗತಿ ಓದುತ್ತಿದ್ದ ಬಾಲಕಿಗೆ ವಿವಾಹ ಮಾಡಿಸಿದ್ದಲ್ಲದೆ, ಈ ವಿಷಯ ಬಯಲಾದರೆ ತಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆ ಎಂದು ಬಾಲಕಿಯ ತಾಳಿ ಬಿಚ್ಚಿಸಿ ಮರುದಿನ ಪರೀಕ್ಷೆಗೆ ಕಳುಹಿಸಿದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 27 ರಂದು ಬಾಲಕಿಗೆ ಪೋಷಕರು ಮನೆಯಲ್ಲೇ ಗುಟ್ಟಾಗಿ ಕೆ.ಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಈ ವಿಷಯವನ್ನು ಸಾರ್ವಜನಿಕವಾಗಿ ತಿಳಿಸಿರಲಿಲ್ಲ. ಆದರೆ 28 ರಂದು ಎಸ್‍ಎಸ್‍ಎಲ್‍ಸಿ ಇದ್ದ ಕಾರಣ ಪೋಷಕರು ಬಾಲಕಿಯ ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯಲು ಕಳುಹಿಸಿದ್ದರು.
ಪರೀಕ್ಷೆ ಬರೆಯಲು ಹೋದಾಗ ಬಾಲಕಿ ತನ್ನ ಸ್ನೇಹಿತೆಯ ಬಳಿ ಮದುವೆ ಬಗ್ಗೆ ಹೇಳಿಕೊಂಡಿದ್ದಾಳೆ. ಮಾಹಿತಿ ಬಹಿರಂಗಗೊಂಡ ಬಳಿಕ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಸ್ತುತ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿ ಇದ್ದಾಳೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರನ್ನು ನೀಡಿದ್ದಾರೆ.
ಬಾಲಕಿಗೆ ಮದುವೆ ನಿಶ್ಚಯವಾಗಿದೆ ಎಂದು ಕಂಪ್ಲೇಂಟ್ ಬಂದ ಹಿನ್ನೆಲೆಯಲ್ಲಿ ಮಾರ್ಚ್ 18 ಮತ್ತು 25 ರಂದು ಅಧಿಕಾರಿಗಳು ಬಾಲಕಿ ಮನೆಗೆ ಭೇಟಿ ನೀಡಿ ವಾರ್ನಿಂಗ್ ನೀಡಿದ್ದರು. ಆದರೂ ಕೂಡ ಪೋಷಕರು ಅಧಿಕಾರಿಗಳ ಬುದ್ಧಿ ಮಾತಿಗೆ ಕೇರ್ ಮಾಡದೇ 27ರಂದು ಬಾಲಕಿಗೆ ಕದ್ದು ವಿವಾಹ ಮಾಡಿದ್ದರು.