ಅವಳಿ ವೀರರ ಹೆಸರಿನಲ್ಲಿ ರಾರಾಜಿಸಲಿದೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ!! ಮುಂದಿನ ತಿಂಗಳಿನಲ್ಲೇ ಕೋಟಿ ಚೆನ್ನಯ ಬಸ್ ನಿಲ್ದಾಣವಾಗಿ ನಾಮಕರಣ-ನಿಗಮದಿಂದ ಗ್ರೀನ್ ಸಿಗ್ನಲ್

ಪುತ್ತೂರು:ಜಿಲ್ಲೆಯಲ್ಲೇ ಅತೀ ದೊಡ್ಡ ಹಾಗೂ ವಿಶಾಲವಾದ ಬಸ್ಸು ತಂಗುದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುತ್ತೂರು ಬಸ್ ನಿಲ್ದಾಣ, ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾರಾಜಿಸಲಿದ್ದು ಶೀಘ್ರವೇ ಅನುಷ್ಠಾನಗೊಳ್ಳಲಿದೆ.

ಶಾಸಕ ಸಂಜೀವ ಮಠಂದೂರು ಅವರ ಅವಿರತ ಶ್ರಮದಿಂದ ಈ ನಿರ್ಧಾರಕ್ಕೆ ಕೆ.ಎಸ್.ಆರ್.ಟಿ.ಸಿ ಒಪ್ಪಿಗೆ ಸೂಚಿಸಿದ್ದು,ಮುಂದಿನ ತಿಂಗಳು ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮ ಜರುಗಲಿದೆ. ಈ ಬಗ್ಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಅವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಲ್ಲೆಯ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸಹಿತ ಸಂಸದ ಕಟೀಲ್, ಸಚಿವ ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ.

ತುಳುನಾಡಿನ ಸುಮಾರು 250 ಕ್ಕೂ ಹೆಚ್ಚು ಗರಡಿಗಳಲ್ಲಿ ಉಪಾಸನೆ ಪಡೆದಿರುವ ಅವಳಿ ವೀರರ ಮೂಲಸ್ಥಾನ ಪುತ್ತೂರಿನಲ್ಲಿ ಇರುವುದರಿಂದ, ಅರಸು ಸಂಸ್ಥಾನವಿದ್ದ ಪಡುಮಲೆ, ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ಸೇರಿದಂತೆ ಎಲ್ಲಾ ಕುರುಹುಗಳು ಇಂದಿಗೂ ಅಳಿಯದೆ ಉಳಿದಿದೆ. ಆದುದರಿಂದ ಪುತ್ತೂರಿನ ಬಸ್ ನಿಲ್ದಾಣಕ್ಕೆ ಅವಳಿ ವೀರರ ಹೆಸರಿಡಲು ಪುತ್ತೂರು ಯುವವಾಹಿನಿ(ರಿ) ಶಾಸಕರಿಗೆ ಎರಡು ವರ್ಷಗಳ ಹಿಂದೆ ಮನವಿ ಸಲ್ಲಿಸಿತ್ತು.

Leave A Reply

Your email address will not be published.