ಒಂದೇ ಒಂದು ನಿಮಿಷ ಕೆಲಸ ಮಾಡಿದ್ದಕ್ಕೆ ಈ ದಂಪತಿಗೆ ಬಂತು ಬರೋಬ್ಬರಿ 19000 ಕೋಟಿ ಕರೆಂಟ್ ಬಿಲ್ !
ಗ್ಯಾಸ್ ಹಾಗೂ ಕರೆಂಟ್ ಬಿಲ್ ಬೆಲೆ ಏರಿಕೆ ಇತ್ತೀಚೆಗೆ ಜಾಸ್ತಿ ಆಗಿದೆ ಖಂಡಿತ. ಆದರೆ ಈ ದಂಪತಿಗೆ ಬಂದ ಬಿಲ್ ನಷ್ಟು ಬಂದಿರಬಹುದೇ ? ಇಂಗ್ಲೆಂಡ್ ನಲ್ಲಿ ಯುವ ದಂಪತಿಗೆ ಬರೋಬ್ಬರಿ 19,146 ಕೋಟಿ ರೂಪಾಯಿ ಎನರ್ಜಿ ಬಿಲ್ ಬಂದಿದೆ ಅಂದರೆ ನೀವು ನಂಬುತ್ತೀರಾ ? ಆದರೆ ಇದು ಸತ್ಯ.
ಕೇವಲ ಒಂದು ನಿಮಿಷ ಗ್ಯಾಸ್ ಬಳಸಿದ್ದಕ್ಕಾಗಿ 19 ಸಾವಿರ ಕೋಟಿ ರೂಪಾಯಿ ಬಿಲ್ ಬಂದಿದ್ದು ನೋಡಿ ದಂಪತಿ ಅಕ್ಷರಶಃ ಶಾಕ್ ಆಗಿದ್ದಾರೆ.
22 ವರ್ಷದ ಸ್ಯಾಮ್ ಮೋಟ್ರಾಮ್ ಮತ್ತು ಮ್ಯಾಡಿ ರಾಬರ್ಟ್‌ಸನ್ ದಂಪತಿ ತಮ್ಮ ಶೆಲ್ ಎನರ್ಜಿ ಅಪ್ಲಿಕೇಶನ್‌ನಲ್ಲಿ ದೊಡ್ಡ ಮೊತ್ತದ ಈ ಬಿಲ್ ನೋಡಿ ಆಘಾತಕ್ಕೊಳಗಾಗಿದ್ದಾರೆ. ಸ್ಯಾಮ್ ಹಾಗೂ ಮ್ಯಾಡಿ ದಂಪತಿ ಇಂಗ್ಲೆಂಡ್‌ನ ಹಾರ್ಪೆಂಡೆನ್‌ನಲ್ಲಿ ವಾಸಿಸುತ್ತಿದ್ದಾರೆ. ಸಾಮಾನ್ಯವಾಗಿ ವರ್ಷಕ್ಕೆ ಸುಮಾರು 1300 ಪೌಂಡ್ ಅಂದ್ರೆ ಸರಿಸುಮಾರು 1.3 ಲಕ್ಷ ರೂಪಾಯಿ ಹಣವನ್ನು ಗ್ಯಾಸ್ ಹಾಗೂ ವಿದ್ಯುತ್ ಗಾಗಿ ಇವರು ಖರ್ಚು ಮಾಡ್ತಾರೆ.
ಕೇವಲ ಒಂದು ನಿಮಿಷ ಗ್ಯಾಸ್ ಉರಿಸಿದ್ದಾರಂತೆ ಅಷ್ಟೇ. ಆದರೆ ಇದ್ದಕ್ಕಿದ್ದಂತೆ ಆಟೋ ಡೆಬಿಟ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬೇಕೆಂದು ಫೋನ್‌ನಲ್ಲಿ ನೋಟಿಫಿಕೇಶನ್ ಬಂದಿದೆ. ವಿಚಿತ್ರ ಎನಿಸಿದ್ರೂ ಎಲ್ಲಾ ವಸ್ತುಗಳ ಬೆಲೆ ಏರಿದೆಯಲ್ಲ ಅಂತಾ ದಂಪತಿ ಸಮಾಧಾನ ಮಾಡಿಕೊಂಡಿದ್ದರು. ಆದ್ರೆ 19,000 ಕೋಟಿ ರೂಪಾಯಿ ಬಿಲ್ ಬರಬಹುದೆಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ ಈ ದಂಪತಿ.
ಅದೃಷ್ಟವಶಾತ್ ದಂಪತಿಯ ಬಳಿ ಅಷ್ಟು ಹಣವಿರಲಿಲ್ಲ. ಖಾತೆಯಲ್ಲಿ ಇದ್ದಿದ್ದರೆ ಸಂಪೂರ್ಣ ಮೊತ್ತ ತಂತಾನೇ ಬಿಲ್ ಪಾವತಿಗಾಗಿ ಡೆಬಿಟ್ ಆಗಿಬಿಡುತ್ತಿತ್ತು ಏನೋ. ಬಿಲ್ ನೋಡಿ ಕಂಗಾಲಾದ ಸ್ಯಾಮ್ ಹಾಗೂ ಮ್ಯಾಡಿ ಸಾಮಾಜಿಕ ಜಾಲತಾಣಗಳಲ್ಲೂ ಇದನ್ನು ಬರೆದಿದ್ದಾರೆ.
ಈ ವಿಷಯ ವೈರಲ್ ಆಗುತ್ತಿದ್ದಂತೆ ಇದು ತಾಂತ್ರಿಕ ದೋಷದಿಂದಾದ ಸಮಸ್ಯೆ ಅಂತಾ ಶೆಲ್ ಎನರ್ಜಿ ಸ್ಪಷ್ಟನೆ ನೀಡಿದೆ. ಶೆಲ್ ಎನರ್ಜಿಯ ಅಪ್ಲಿಕೇಶನ್‌ನಲ್ಲಿನ ದೋಷದಿಂದ ಇಷ್ಟೊಂದು ಮೊತ್ತದ ಬಿಲ್ ಬಂದಿರೋದು ಸ್ಪಷ್ಟವಾಗಿದೆ. ಸ್ಯಾಮ್ ಮತ್ತು ಮ್ಯಾಡಿ ದಂಪತಿಗೆ ಇದರಿಂದ ತೊಂದರೆಯಾಗದಂತೆ ಬಿಲ್ ಸರಿಪಡಿಸೋದಾಗಿ ಇಲಾಖೆ ಭರವಸೆ ನೀಡಿದೆಯಂತೆ.