ಬ್ಲೂಟೂತ್ ಬಳಕೆದಾರರೇ ಗಮನಿಸಿ | ಬ್ಲೂಟೂತ್ ಬಳಸುವಾಗ ಸ್ವಲ್ಪ ಯಾಮಾರಿದರೂ ಆಪತ್ತು ನಿಮ್ಮನ್ನು ಸುತ್ತಿಕೊಳ್ಳಬಹುದು, ಎಚ್ಚರ!!

ಜಗತ್ತು ಟೆಕ್ನಾಲಜಿ ಅತ್ತ ದಾಪುಕಾಲು ಹಾಕಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಮಾನವನಿಗೆ ಒಂಚೂರು ಕೆಲಸವೇ ಇಲ್ಲದೆ ಆರಾಮವಾಗಿ ಕುಳಿತುಕೊಳ್ಳುವ ಮಟ್ಟಿಗೆ. ಇಂತಹ ತಂತ್ರಜ್ಞಾನ ಎಷ್ಟು ಬಂದರೂ ಇದರಿಂದ ಉಪಕಾರವಾಗುವುದಕ್ಕಿಂತ ಹೆಚ್ಚಾಗಿ ಅಪಾಯವೇ ಇರುತ್ತದೆ. ಆದ್ರೆ ಇದು ಕಣ್ಣಿಗೆ ಕಾಣದ ರೀತಿಲಿ ಇರುತ್ತದೆ, ಮಾನವನಿಗೆ ಗೋಚರಿಸುವುದು ಅದರಿಂದ ಆಗುವ ಉಪಕಾರ ಮಾತ್ರ.

ಹೌದು.ಜಗತ್ತು ವೈರ್​ಲೆಸ್​ ಯುಗವಾಗಿ ಪರಿವರ್ತನೆ ಆಗುತ್ತಿರುವುದಲ್ಲಿ ಸಂಶಯವೇ ಇಲ್ಲ.ಇದೇ ರೀತಿ ಇಂದು ಎಲ್ಲರೂ ಬಳಸುವ ವಸ್ತುವಿನಲ್ಲಿ ಒಂದು ಬ್ಲೂಟೂತ್​ ಕೂಡ ಹೌದು.ಬ್ಲೂಟೂತ್​ ಸುಲಭ ಮಾರ್ಗವಾಗಿದ್ದು, ಎಚ್ಚರಿಕೆ ವಹಿಸದಿದ್ರೆ ಅಷ್ಟೇ ಅಪಾಯಕಾರಿ.ಅದಕ್ಕಾಗಿ ಬ್ಲೂಟೂತ್​ ಬಳಸುವ ಮೊದಲು ಕೆಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ, ಅಪಾಯ ತಪ್ಪಿದ್ದಲ್ಲ ಎಂದು ಸಿಐಡಿ ಸೈಬರ್​ ಕ್ರೈಂ ವಿಭಾಗದ ಅಧಿಕಾರಿಗಳು ಕಿವಿ ಮಾತು ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಮೊಬೈಲ್​, ಲ್ಯಾಪ್​ಟಾಪ್​, ಸ್ಮಾರ್ಟ್​ ವಾಚ್​ನಲ್ಲಿ ಬ್ಲೂಟೂತ್​ ಆನ್​ ಮಾಡಿದ್ದರೆ ಹ್ಯಾಕರ್ಸ್​ಗಳು ಸುಲಭವಾಗಿ ಒಳನುಗ್ಗಿ ನಮ್ಮ ಉಪಕರಣಗಳಲ್ಲಿ ಇರುವ ಡೇಟಾ ಕಳವು ಮಾಡುವ ಸಾಧ್ಯತೆ ಇರುತ್ತೆ.ಫೋನ್​, ಟ್ಯಾಬ್​ ಮತ್ತು ಲ್ಯಾಟ್​ಟಾಪ್​ನಲ್ಲಿ ಇರುವ ಸಂದೇಶ, ಇಮೇಲ್​, ಫೋಟೋ ಮತ್ತು ಗೌಪ್ಯ ಮಾಹಿತಿ ಮಾಡಿ ಅವುಗಳನ್ನು ಬಳಸಿಕೊಂಡು ಬ್ಯಾಂಕ್​ ಖಾತೆಗೆ ಕನ್ನ ಹಾಕುವ ಎಲ್ಲ ಸಾಧ್ಯತೆಗಳಿವೆ. ಇಲ್ಲವೇ ನಮ್ಮ ಖಾಸಗಿ ಫೋಟೋ ಅಥವಾ ಇಮೇಲ್​ಗಳನ್ನು ಅಸ್ತ್ರವಾಗಿ ಮಾಡಿಕೊಂಡು ಹಣ ವಸೂಲಿಗೆ ಬ್ಲ್ಯಾಕ್​ಮೇಲ್​ ಸಹ ಮಾಡುತ್ತಾರೆ. ಇಂತಹ ಕೃತ್ಯಕ್ಕೆ ‘ಬ್ಲೂಸ್ನಾರ್ಫಿಂಗ್​’ ಎನ್ನುತ್ತಾರೆ.

ಮತ್ತೊಂದು ‘ಬ್ಲೂಜಾಕಿಂಗ್​’. ಆನ್​ ಆಗಿರುವ ಬ್ಲೂಟೂತ್​ ಡಿವೈಸ್​ಗೆ ಹ್ಯಾಕರ್ಸ್​ಗಳು ಕನೆಕ್ಷನ್​ ಮಾಡಿಕೊಂಡು ನಿಮ್ಮ ಫೋನ್​ಗೆ ಅಕ್ಸೆಸ್​ ಪಡೆದು ಸುತ್ತಮುತ್ತಲಿನ ಇತರ ಡಿವೈಸ್​ಗಳಿಗೆ ಅಶ್ಲೀಲ ಅಥವಾ ಬೆದರಿಕೆ ಸಂದೇಶ ಕಳುಹಿಸಬಹುದು. ಇದಕ್ಕೆ ಬ್ಲೂಜಾಕಿಂಗ್​ ಎಂದು ಸೈಬರ್​ ತಜ್ಞರು ಹೇಳುತ್ತಾರೆ. ಇದಲ್ಲದೆ, ಸಾರ್ವಜನಿಕರ ಡಿವೈಸ್​ ಬಳಸಿಕೊಂಡು ಮತ್ತೊಬ್ಬರಿಗೆ ಡೇಟಾ ವರ್ಗಾವಣೆ ಮಾಡುವ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿ ಪೊಲೀಸ್​ ಕೇಸ್​ ದಾಖಲಾದರೇ ಸೈಬರ್​ ಕಳ್ಳರು ಯಾರ ಬ್ಲೂಟೂತ್​ ಬಳಸಿಕೊಂಡಿರುತ್ತಾರೋ ಅವರೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುವ ಸಂಕಷ್ಟ ಎದುರಾಗುತ್ತದೆ.

ಹೊಸ ಆಯಪ್​, ಅಪ್ಲಿಕೇಷನ್​ ಡೌನ್​ಲೋಡ್​ ಅಥವಾ ಅಪ್​ಡೇಡ್​ ವೇಳೆ ಕೇಳುವ ಪರ್ಮಿಷನ್​ ಪಟ್ಟಿಯನ್ನು ಎಚ್ಚರಿಕೆಯಿಂದ ಓಕೆ ಮಾಡುವುದರಿಂದ ಅನಿರೀಕ್ಷಿತ ಮತ್ತು ಹಠಾತ್​ ದಾಳಿ ತಪ್ಪಲಿದೆ.ಪಾಸ್​ವರ್ಡ್​, ಗೌಪ್ಯ ಮಾಹಿತಿಯನ್ನು ಬ್ಲೂಟೂತ್​ನಲ್ಲಿ ಕಳುಹಿಸಬೇಡಿ. ಅಗತ್ಯವಿದ್ದರೇ ಫೈಲ್​ಗಳನ್ನು ಎನ್​ಕ್ರಿಪ್ಟ್​ ಮಾಡಿದ ನಂತರವಷ್ಟೇ ಕಳುಹಿಸಿ.ಬ್ಲೂಟೂತ್​ ದಾಳಿ ಹತ್ತಿರದಿಂದ ಮಾತ್ರವೇ ಸಾಧ್ಯ. ಅದಕ್ಕಾಗಿ ಸುತ್ತಲ ಜಾಗದ ಮತ್ತು ಜನರ ಬಗ್ಗೆ ಎಚ್ಚರಿಕೆ ಇರಲಿ ಎಂದು ಸಿಐಡಿ ಸೈಬರ್​ ಕ್ರೈಂ ವಿಭಾಗದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Leave A Reply

Your email address will not be published.