ಬರೋಬ್ಬರಿ 11 ರೀತಿಯ ವಾಹನಗಳ ಚಾಲನಾ ಪರವಾನಿಗೆ ಪಡೆದಿದ್ದಾರಂತೆ ಈ ಅಜ್ಜಿ !! | ಜೆಸಿಬಿಯಿಂದ ಹಿಡಿದು ರೋಡ್ ರೋಲರ್, ಕ್ರೇನ್, ಟ್ರಕ್ ಹೀಗೆ ಯಾವುದೇ ವಾಹನವಾಗಿರಲಿ ಎಲ್ಲದಕ್ಕೂ ಸೈ
ಜನರು ತಮ್ಮ ಜೀವನದಲ್ಲಿ ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ನಮ್ಮ ಹವ್ಯಾಸಗಳು ನಮ್ಮ ಕೆಲಸದಿಂದ ಸ್ವಲ್ಪ ಮಟ್ಟಿನ ವಿರಾಮದ ಜೊತೆಗೆ ನಮ್ಮನ್ನು ರಿಫ್ರೆಶ್ ಮಾಡುತ್ತದೆ. ಆದರೆ ಕೇರಳದ 71 ವರ್ಷದ ಈ ಅಜ್ಜಿಯ ಹವ್ಯಾಸವನ್ನು ಕೇಳಿದರೆ ನೀವು ಮೂಗಿನ ಮೇಲೆ ಕೈ ಇಡುವುದು ಪಕ್ಕಾ !!
ಹೌದು. ಈ ಅಜ್ಜಿ ವಿವಿಧ ವಾಹನಗಳನ್ನು ಓಡಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜೆಸಿಬಿಯಿಂದ ಹಿಡಿದು ಕ್ರೇನ್, ರೋಡ್ ರೋಲರ್, ಟ್ರಕ್, ಟ್ರ್ಯಾಕ್ಟರ್‌ಗಳನ್ನೂ ಓಡಿಸುತ್ತಾರೆ. ಕೊಚ್ಚಿಯ ತೆಪ್ಪುಂಪಾಡಿ ನಿವಾಸಿ ರಾಧಾಮಣಿ ಅವರೇ ವಿವಿಧ ಮಾದರಿಗಳ ವಾಹನಗಳನ್ನು ಓಡಿಸುವ ಹವ್ಯಾಸವನ್ನು ಹೊಂದಿರುವರು.
ಕೇವಲ ಹವ್ಯಾಸಿ ಮಾತ್ರವಲ್ಲದೆ, ಈ ಎಲ್ಲಾ 11 ವಿವಿಧ ರೀತಿಯ ವಾಹನಗಳನ್ನು ಓಡಿಸಲು ಅವರು ಪರವಾನಗಿಯನ್ನೂ ಪಡೆದುಕೊಂಡಿದ್ದಾರೆ. 11 ವಿವಿಧ ವಾಹನ ಪರವಾನಗಿಗಳನ್ನು ಹೊಂದಿರುವ ಕೇರಳದ ಏಕೈಕ ಮಹಿಳೆ ರಾಧಾಮಣಿ ಆಗಿದ್ದಾರೆ.
ರಾಧಾಮಣಿ ತಮ್ಮ 30ನೇ ವಯಸ್ಸಿನಲ್ಲಿ ಡ್ರೈವಿಂಗ್ ಕಲಿತರು. ತಂದೆಯಿಂದ ವಾಹನ ಓಡಿಸುವ ತರಬೇತಿ ಪಡೆದ ಅವರು ಅಂದಿನಿಂದ ವಾಹನ ಚಲಾಯಿಸುವ ಹವ್ಯಾಸ ರೂಢಿಸಿಕೊಂಡರು. 1988ರಲ್ಲಿ ಅವರಿಗೆ ಬಸ್ ಮತ್ತು ಲಾರಿ ಓಡಿಸಲು ಪರವಾನಗಿ ಪಡೆದರು. ನಂತರ ಅವರು ತೆಪ್ಪುಂಪಾಡಿಯಿಂದ ಚೆರ್ತಾಲ ನಡುವೆ ಮೊದಲ ಬಾರಿಗೆ ಬಸ್ ಓಡಿಸಿದರು. ಈ ಸಾಧನೆ ಮಾಡಿ ಸಾರಿಗೆ ಇಲಾಖೆಯಿಂದ ಅಪಾರ ಮೆಚ್ಚುಗೆಗೆ ಕೂಡ ಪಾತ್ರರಾದರು. ಕಳೆದ ವರ್ಷ ಅವರು ಸರಕುಗಳನ್ನು ಸಾಗಿಸುವ ಅಪಾಯಕಾರಿ ವಾಹನ ಓಡಿಸಲು ಪರವಾನಗಿ ಪಡೆದುಕೊಂಡರು.
ರಾಧಾಮಣಿಯವರಿಗೆ ಡ್ರೈವಿಂಗ್ ಮಾಡುವುದಷ್ಟೇ ಅಲ್ಲ, ಇತರರಿಗೆ ಡ್ರೈವಿಂಗ್ ಕಲಿಸುವುದೂ ಇಷ್ಟ. A to Z ಎಂಬ ಡ್ರೈವಿಂಗ್ ಸ್ಕೂಲ್ ಅನ್ನು ಅವರ ಪತಿ 1970ರಲ್ಲಿ ಪ್ರಾರಂಭಿಸಿದ್ದರು. 2004ರಲ್ಲಿ ಅವರ ಮರಣದ ನಂತರ ರಾಧಾಮಣಿಯವರೇ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಇವರ ಡ್ರೈವಿಂಗ್ ಶಾಲೆಯಲ್ಲಿ ವಿವಿಧ ವಾಹನಗಳನ್ನು ಓಡಿಸಲು ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಅವರು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಇವರ ಇಡೀ ಕುಟುಂಬವೇ ಈಗ ಡ್ರೈವಿಂಗ್ ಸ್ಕೂಲ್ ನಡೆಸುವುದರಲ್ಲಿ ರಾಧಾಮಣಿಯವರಿಗೆ ಸಹಾಯ ಮಾಡುತ್ತಿದೆ. ಈಗಲೂ ರಾಧಾಮಣಿಯವರು ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಸದ್ಯ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡುತ್ತಿದ್ದಾರೆ.