ಕ್ಷುಲ್ಲಕ ಕಾರಣಕ್ಕೆ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಪತಿ|ಮೊದಲ ಪತಿಯಿಂದ ಆಕೆಗೆ ಜನಿಸಿದ್ದ ಹೆಣ್ಣು ಮಗುವನ್ನು ಕಚ್ಚಿ ವಿಕೃತಿ

ಕುಡಿಯಲು ಹಣ ನೀಡದಕ್ಕೆ ಕೋಪಗೊಂಡ ಪತಿ ಗರ್ಭಿಣಿಯೆಂದು ನೋಡದೆ ಪತ್ನಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದೂ ಅಲ್ಲದೇ ಮಗುವನ್ನು ಕಚ್ಚಿ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೈಯಪ್ಪನಹಳ್ಳಿಯಲ್ಲಿ ವಾಸವಾಗಿದ್ದ ಎರಡೂವರೆ ತಿಂಗಳ ಗರ್ಭಿಣಿ ಮೀನಾ (23) ಸುಟ್ಟಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪತಿ ಬಾಬು (37) ಕೊಲೆಗೆ ಯತ್ನಿಸಿದ ವ್ಯಕ್ತಿ.

ಮೀನಾರವರು ವಿಜಯಕಾಂತ್ ಅವರನ್ನು 7 ವರ್ಷದ ಹಿಂದೆ ವಿವಾಹವಾಗಿದ್ದು, 3 ವರ್ಷಗಳ ಹಿಂದೆ ಮೃತಪಟ್ಟಿದ್ದ.ನಂತರ ಮೀನಾಗೆ ಬಾಬು ಎಂಬಾತನ ಪರಿಚಯವಾಗಿದ್ದು, ಮದುವೆ ಆಗುತ್ತೇನೆ ಎಂದು ಬಾಬು ಮುಂದೆ ಬಂದಿದ್ದರಿಂದ ಒಪ್ಪಿಕೊಂಡಿದ್ದರು.ಹೀಗಾಗಿ ಬಾಬುನನ್ನು ಎರಡನೇ ಮದುವೆ ಆಗಿದ್ದರು.

ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಕುಡಿದು ಹಾಳು ಮಾಡುತ್ತಿದ್ದ ಬಾಬು ಜೊತೆ ಮಾರ್ಚ್ 9ರಂದು ಇದೇ ವಿಷಯಕ್ಕೆ ಜಗಳವಾಗಿದ್ದು, ದುಡ್ಡು ಕೊಡದಿದ್ದರೆ ಡೀಸೆಲ್ ಸುರಿದು ಸುಟ್ಟು ಹಾಕುತ್ತೇನೆ ಎಂದು ಬೆದರಿಸಿದ್ದ.ನೀನು ಯಾಕೆ ಸಾಯಿಸ್ತಿಯಾ? ನಾನೇ ಸಾಯ್ತಿನಿ ಎಂದು ಮೀನಾ ಹೇಳಿದಾಗ ಬಾಬು ಡೀಸೆಲ್ ಸುರಿದು ಮೀನಾಗೆ ಬೆಂಕಿ ಹಚ್ಚಿದ್ದ. ಇದೇ ವೇಳೆ ಸಿಟ್ಟಿನಿಂದ ಮೊದಲ ಪತಿಯಿಂದ ಜನಿಸಿದ್ದ ಹೆಣ್ಣು ಮಗುವನ್ನು ಕಚ್ಚಿ ವಿಕೃತಿ ಮೆರೆದಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಬಾಬುನನ್ನು ಬಂಧಿಸಿದ್ದಾರೆ.

Leave A Reply