ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿಗರಿಂದ ಮತ್ತೆ ಸದ್ದು ಮಾಡಿದ ನಂಗಾನಾಚ್ !! | ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಚುನಾವಣೆ ಹತ್ತಿರವಾಗುತ್ತಿದ್ದ ಹಾಗೆ ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಒಂದೆಲ್ಲಾ ಒಂದು ರೀತಿಯ ಸರ್ಕಸ್ ಮಾಡಲು ಶುರು ಮಾಡುತ್ತಾರೆ. ಇದೀಗ ಅಂತಹದೇ ಒಂದು ಗಿಮಿಕ್ ಮಾಡಲು ಹೋದ ಕಾಂಗ್ರೆಸ್ ಮುಖಂಡನ ಬೆಂಬಲಿಗರು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

 

ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮದ ಗ್ರಾಮದೇವತೆ ಹಬ್ಬದ ಅಂಗವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಎರಡು ಗುಂಪು ಪ್ರತ್ಯೇಕವಾಗಿ ವೇದಿಕೆ ನಿರ್ಮಾಣ ಮಾಡಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಒಂದು ಗುಂಪು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಬೆಂಬಲಿಗರದ್ದು. ಮತ್ತೊಂದು ಗುಂಪು ಶಾಸಕ ಸುರೇಶ್‍ಗೌಡರದ್ದು. ಸುರೇಶ ಗೌಡರ ಬೆಂಬಲಿಗರು ಅವರನ್ನು ಕರೆಸಿ ವೇದಿಕೆಯ ಮೇಲೆ ಸನ್ಮಾನ ಮಾಡಿ ವೇದಿಕೆ ಮೇಲೆ ಭಾಷಣ ಮಾಡಿಸಿದ್ದರು.

ಇದಾದ ಬಳಿಕ ಸುರೇಶ್‍ಗೌಡ ಬೆಂಬಲಿಗರು ವೇದಿಕೆಯ ಮೇಲೆ ಒಂದಷ್ಟು ನೃತ್ಯ ಕಾರ್ಯಕ್ರಮವನ್ನು ನಡೆಸಿದರು. ಇನ್ನೊಂದು ಕಡೆ ಇದೇ ಊರಿನಲ್ಲಿ ಚಲುವರಾಯಸ್ವಾಮಿ ಬೆಂಬಲಿಗರು ಸಹ ನೃತ್ಯ ಕಾರ್ಯಕ್ರಮ ಮಾಡಿದ್ದರು. ಆದರೆ ಚಲುವರಾಯಸ್ವಾಮಿ ಬೆಂಬಲಿಗರು ಮಾಡಿಸಿದ ಈ ನೃತ್ಯ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ಗಳು ಅರೆಬರೆ ಬಟ್ಟೆ ಧರಿಸಿ ನೃತ್ಯ ಮಾಡಿದ್ದರು. ಈ ವೇಳೆ ಬಾಲಕನೊಬ್ಬನನ್ನು ಡ್ಯಾನ್ಸರ್ ಗಳು ವೇದಿಕೆಯ ಮೇಲೆ ಕರೆತಂದು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ನೃತ್ಯಗಾರ್ತಿಯರು ಇಡೀ ಕಾರ್ಯಕ್ರಮ ಉದ್ದಕ್ಕೂ ಅಶ್ಲೀಲವಾಗಿ ನಡೆದುಕೊಂಡಿದ್ದು, ಸಭ್ಯಸ್ಥರು ತಲೆ ತಗ್ಗಿಸುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ನಾಗಮಂಗಲದಲ್ಲಿ ಆರ್ಕೆಸ್ಟ್ರ ಕಾರ್ಯಕ್ರಮದಲ್ಲಿ ಅಶ್ಲೀಲವಾಗಿ ನೃತ್ಯ ಮಾಡಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ಕಾರ್ಯಕ್ರಮ ನಡೆದಿದ್ದು, ಗ್ರಾಮದೇವತೆ ಹಬ್ಬದ ನೆಪದಲ್ಲಿ ಈ ರೀತಿಯ ಅಶ್ಲೀಲ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಕ್ಕರೆ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಲುವರಾಯಸ್ವಾಮಿ ಬೆಂಬಲಿಗರ ಈ ವರ್ತನೆ ವಿರುದ್ಧ ಹಾಗೂ ಚಲುವರಾಯಸ್ವಾಮಿ ವಿರುದ್ಧ ಸದ್ಯ ನಾಗಮಂಗಲದ ಜನರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ.

Leave A Reply

Your email address will not be published.